ಸಿದ್ದಾಪುರ, ಜು. ೩: ಅರಣ್ಯದಂಚಿನ ಹಾಗೂ ಮನೆಗಳ ಸಮೀಪದಲ್ಲಿ ಅದೆಷ್ಟೊ ಗಿಡಮರಗಳು ಬೆಳೆದು ನಿಂತಿರುತ್ತವೆ
ಬಹುತೇಕ ಮಂದಿಗೆ ಗಿಡಮರಗಳ ಹೆಸರು ಮಾತ್ರ ಗೊತ್ತಿರುತ್ತದೆ. ಆದರೆ ಅದರ ಮಹತ್ವ ಮಾತ್ರ ಬಹುತೇಕರಿಗೆ ಗೊತ್ತಿರುವುದಿಲ್ಲ. ಆದರೆ ಚೆನ್ನಂಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗಿಡ ಮರಗಳಲ್ಲಿರುವ ಔಷಧೀಯ ಗುಣಗಳ ಮಹತ್ವವನ್ನು ಸ್ಥಳೀಯರಿಗೆ ಪರಿಚಯಿಸುವ ಮೂಲಕ ಆಯುರ್ವೇದ ಸಸ್ಯದ ಔಷಧಿಗಳನ್ನು ಬಳಸಿ ಆರೋಗ್ಯವಂತರಾಗಿರಿ ಎಂಬ ಸಂದೇಶ ಸಾರಿ ಮೆಚ್ಚುಗೆಗೆ ಪಾತ್ರರಾದರು.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಸರ್ಕಾರಿ ಶಾಲೆಯಲ್ಲಿ ಔಷಧ ಸಿಂಚನ ಎಂಬ ವಿನೂತನ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.
೧ ರಿಂದ ೭ನೇ ತರಗತಿಯ ಸುಮಾರು ೫೦ ವಿದ್ಯಾರ್ಥಿಗಳು ಮನೆಯ ಸುತ್ತಮುತ್ತಲಿನಲ್ಲಿ ಬೆಳೆದು ನಿಂತ ಮರಕೆಸ, ಕಾಡು ಸಾಂಬಾರ, ಶುಂಠಿ, ಅಮೃತ ಬಳ್ಳಿ, ಕೊತ್ತಂಬರಿ, ಪುದೀನ, ನಿಂಬೆ, ಹಾಗಲಕಾಯಿ, ಕರಿಬೇವು, ತುಂಬೆ, ತುಳಸಿ, ಬಾಳೆ, ಸೀಬೆ, ದಾಳಿಂಬೆ, ನೇರಳೆ, ಕಾಚಿ ಪುಳಿ, ಬದನೆಕಾಯಿ, ಸಾಸಿವೆ, ಈರುಳ್ಳಿ, ಬೆಳ್ಳುಳ್ಳಿ, ನೀಲಗಿರಿ, ಗಾಂಧಾರಿ ಮೆಣಸು, ಆಟಿ ಸೊಪ್ಪು, ಕಣಲೇ, ಕಾಮಕಸ್ತೂರಿ, ಗುಲಾಬಿ, ನಾಗದಾಳಿ, ದೊಡ್ಡಪತ್ರೆ, ಪಾಲಕ್ ಸೇರಿದಂತೆ ತರಕಾರಿ ಹೂವು ಹಣ್ಣು ಗಿಡ ಮರಗಳನ್ನು ತಂದು ಮಹತ್ವದ ಬಗ್ಗೆ ಪರಿಚಯಿಸಿದರು. ಮನುಷ್ಯನ ಆರೋಗ್ಯಕ್ಕೆ ಅನುಗುಣವಾಗಿ ಗಿಡಮೂಲಿಕೆಗಳ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟರು.
ಉಪಯುಕ್ತ ಗಿಡಮರಗಳನ್ನು ಉಳಿಸಿ ಬೆಳೆಸುವುದರ ಮೂಲಕ ಆಯುರ್ವೇದ ಗಿಡಮೂಲಿಕೆಗಳ ಔಷಧಿ ಬಳಕೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆAಬ ಸಂದೇಶ ಸಾರಿದರು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ೫೦ಕ್ಕೂ ಹೆಚ್ಚು ಗಿಡಮೂಲಿಕೆಗಳ ಮಹತ್ವವನ್ನು ಪರಿಚಯಿಸಿದ್ದಾರೆ. ಚೆನ್ನಂಗಿ ಶಾಲೆಯ ಶಿಕ್ಷಕರುಗಳು ಮಕ್ಕಳನ್ನು ಶಾಲೆಯ ಪಾಠಕ್ಕೆ ಮಾತ್ರ ಸೀಮಿತಗೊಳಿಸದೆ ಅವರಿಗೆ ಕೃಷಿ, ಗಿಡಮೂಲಿಕೆಗಳು, ಪರಿಸರ, ಶುಚಿತ್ವ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕಿನ ಶಿಕ್ಷಣ ಸಂಯೋಜಕಿ ವಿಶಾಲಾಕ್ಷಿ ಮಾತನಾಡಿ, ಮುಖ್ಯ ಶಿಕ್ಷಕಿ ಕೆ.ಕೆ. ಸುಷಾ ನೇತೃತ್ವದ ಶಿಕ್ಷಕರ ಪರಿಶ್ರಮದಿಂದ ಮಕ್ಕಳು ಹೆಚ್ಚಿನ ದಾಖಲಾತಿಯ ಮೂಲಕ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿದ್ದಾರೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ. ಸುಷಾ ಮಾತನಾಡಿ, ಪ್ರತಿ ತಿಂಗಳು ಶಾಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ವಿಷಯಗಳನ್ನು ಮುಂದಿಟ್ಟುಕೊAಡು ವೃತ್ತಿ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಪೋಷಕರು ಸಹಕಾರ ನೀಡುತ್ತಿದ್ದು ದಾನಿಗಳು ಕೈಜೋಡಿಸುತ್ತಿದ್ದಾರೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರುಗಳಾದ ಪ್ರತಿಮಾ, ಮಂಜುಳಾ, ಸತೀಶ್ ಸೇರಿದಂತೆ ಪೋಷಕರು ಹಾಜರಿದ್ದರು.