ಮಡಿಕೇರಿ, ಜು. ೨: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ ತಾ.೬ರಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿ ಅಧ್ಯಕ್ಷ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಅಭಿನಂದನಾ ಸಂಚಿಕೆಯನ್ನು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಲಿದ್ದಾರೆ. ಐವತ್ತೆöÊದು ಸೇವಾ ಚಟುವಟಿಕೆಗಳಿಗೆ ಎಂಎಲ್‌ಸಿ ಸಲೀಂ ಅಹ್ಮದ್, ಚಟುವಟಿಕೆಗಳ ಸವಲತ್ತು ವಿತರಣೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸದಾನಂದ ಮಾವಾಜಿ ವಹಿಸಲಿದ್ದು, ಸನ್ಮಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವಾನ್ ಡಿಸೋಜ, ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ. ಸದಾಶಿವ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸದಾನಂದ ಮಾವಾಜಿ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಉಪಾಧ್ಯಕ್ಷರಾದ ಮಹಮದ್ ಇಕ್ಬಾಲ್ ಎಲಿಮಲೆ, ಪರಶುರಾಮ ಚಿಲ್ಲಡ್ಕ, ಆಹಾರ ಸಮಿತಿ ಅಧ್ಯಕ್ಷ ರಾಧಕೃಷ್ಣ ಬೆಳ್ಳೂರು, ಸಮಿತಿ ಪದಾಧಿಕಾರಿ ಅಬ್ಬಾಸ್, ದ.ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಉಪಸ್ಥಿತರಿದ್ದರು.