ಸೋಮವಾರಪೇಟೆ, ಜು. ೨: ಸಾಲ ಬಾಧೆಯಿಂದ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ಗುಬ್ಬನಮನೆ ನಿವಾಸಿ ಚಂದ್ರಶೇಖರ್(೫೨) ಎಂಬವರೇ ಸಾವನ್ನಪ್ಪಿದವರು. ಜೂ ೩೦ರ ಸಂಜೆ ೬ ಗಂಟೆ ಸುಮಾರಿಗೆ ಮನೆ ಸಮೀಪ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡ ಇವರನ್ನು ಪತ್ನಿ ಸೇರಿದಂತೆ ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ತಾ. ೧ ರಂದು ಬೆಳಿಗ್ಗೆ ೫.೩೦ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರಶೇಖರ್ ಅವರು ಇಹಲೋಕ ತ್ಯಜಿಸಿದ್ದಾರೆ.
೪ ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಚಂದ್ರಶೇಖರ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದು, ಜಮೀನಿನಲ್ಲಿ ಸರಿಯಾಗಿ ಆದಾಯ ಬರದೇ ಇದ್ದುದರಿಂದ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಬೇರೆಯವರಿಗೆ ಕೈ ಸಾಲ ಪಡೆದು ಬ್ಯಾಂಕ್ಗೆ ಕಟ್ಟುತ್ತಿದ್ದರು. ಪತ್ನಿಯ ಚಿನ್ನವನ್ನೂ ಅಡವಿಟ್ಟಿದ್ದರು. ಹೀಗಿದ್ದರೂ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಸಾಧ್ಯವಾಗಿರ ಲಿಲ್ಲ. ಈ ಬಗ್ಗೆ ತನ್ನೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ನಳಿನಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ಚಂದ್ರಶೇಖರ್ ಅವರು ತಾಯಿ ಸೇರಿದಂತೆ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.