ಮಡಿಕೇರಿ, ಜು.೨: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಪ್ರಕರಣಗಳು ದಿನದಿಂದ ದಿನಕ್ಕೆ ಗುರುತಿಸಲ್ಪಡುತ್ತಿದ್ದು, ಈ ಸಾಂಕ್ರಾಮಿಕ ಖಾಯಿಲೆಗಳು ಸೊಳ್ಳೆಗಳಿಂದ ಬರುವುದಾಗಿದೆ. ಮುಖ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಅಲ್ಲಲ್ಲಿ ಶೇಖರಣೆಗೊಂಡು ಸೊಳ್ಳೆಗಳು ಮೊಟ್ಟೆಯಿಟ್ಟು ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.
ಆದ್ದರಿಂದ ನಗರಸಭೆ ವ್ಯಾಪ್ತಿಯ ಎಲ್ಲಾ ಗುಜರಿ ಮತ್ತು ಪಂಚರ್ ಶಾಪ್ ಹಾಗೂ ಹಳೆ ಟಯರ್ ದಾಸ್ತಾನು, ಎಳನೀರು ವ್ಯಾಪಾರಗಳ ವ್ಯಾಪಾರಸ್ಥರು ನಿಮ್ಮ-ನಿಮ್ಮ ಅಂಗಡಿ/ಗೋದಾಮುಗಳ ಕಟ್ಟಡದ ಹೊರಗೆ ರಸ್ತೆ ಬದಿಗಳಲ್ಲಿ ಅಂಗಡಿಗಳಲ್ಲಿ ಶೇಖರಿಸಲ್ಪಡುವ ಪ್ಲಾಸ್ಟಿಕ್ ವಸ್ತುಗಳು, ಡ್ರಂಗಳು, ಟಯರ್ಗಳು, ವಾಹನದ ಬಿಡಿಭಾಗಗಳು ಹಾಗೂ ಇತರೆ ವಸ್ತುಗಳಲ್ಲಿ ನೀರು ಶೇಖರಣೆಗೊಳ್ಳದಂತೆ ಜಾಗ್ರತೆ ವಹಿಸುವುದು. ಈ ಬಗ್ಗೆ ಎಲ್ಲಾ ಅಂಗಡಿ ಹಾಗೂ ಗೋದಾಮುಗಳ ಮಾಲೀಕರುಗಳಿಗೆ ಮಡಿಕೇರಿ ನಗರಸಭೆ ಕಚೇರಿಯಿಂದ ನೋಟಿಸ್ ನೀಡಲಾಗುತ್ತಿದೆ.
ಇದನ್ನು ಉಲ್ಲಂಘಿಸಿ ರಸ್ತೆ ಬದಿಗಳಲ್ಲಿ ಗುಜರಿ ವಸ್ತುಗಳನ್ನು ಇಡುವುದು, ಇತರೆ ವ್ಯಾಪಾರಿಗಳಿಂದ ಈ ರೀತಿ ಕಂಡುಬAದಲ್ಲಿ ನಗರಸಭೆ ವತಿಯಿಂದ ರಸ್ತೆ ಬದಿಗಳಲ್ಲಿ ಶೇಖರಿಸಿರುವ ಗುಜರಿ ವಸ್ತುಗಳು, ಇತರೆ ವಸ್ತುಗಳನ್ನು ಮುಟ್ಟುಗೋಲು ಹಾಕಲಾಗುವುದು ಹಾಗೂ ಈ ವಸ್ತುಗಳಲ್ಲಿ ನೀರು ಶೇಖರಣೆಗೊಂಡು ಸಾಂಕ್ರಮಿಕ ರೋಗ ಉತ್ಪತ್ತಿಗೆ ಕಾರಣರಾದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ೧೯೮೭ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ೨೦೨೦ ರಡಿಯಲ್ಲಿ ನಿಮ್ಮ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಈ ಮೂಲಕ ಪ್ರಕಟಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.