ಮಡಿಕೇರಿ, ಜು. ೨: ಬಾಲಿವುಡ್ ತಾರೆಯಾಗಿಯೂ ಗುರುತಿಸಿಕೊಂಡಿರುವ ಖ್ಯಾತ ಚಿತ್ರನಟಿ ಕೊಡಗಿವರಾದ ರಶ್ಮಿಕಾ ಮಂದಣ್ಣ ಚಿತ್ರೀಕರಣದ ಒತ್ತಡದ ನಡುವೆ ಬಾಲ್ಯ ಸ್ನೇಹಿತೆ ಅಮ್ಮಣಕುಟ್ಟಂಡ ಯಾತ್ರಾ ದೇಚಮ್ಮ ವಿವಾಹಕ್ಕೆ ಸದ್ದಿಲ್ಲದೆ ಜಿಲ್ಲೆಗೆ ಆಗಮಿಸಿ ಹಿಂತಿರುಗಿದ್ದಾರೆ. ಪ್ರಸ್ತುತ ಬಾಲಿವುಡ್‌ನ ಖ್ಯಾತನಾಮರೊಂದಿಗೂ ನಟಿಸುವ ಅವಕಾಶ ಪಡೆದಿರುವ ರಶ್ಮಿಕಾ ಚಿತ್ರರಂಗದಲ್ಲಿ ಬಿಡುವಿಲ್ಲದಂತೆ ಒಂದರಮೇಲೊAದರAತೆ ಹಲವು ಚಿತ್ರಗಳಲ್ಲಿ ಅವಕಾಶ ಪಡೆದಿದ್ದು, ಸದ್ಯದಲ್ಲೇ ಸಲ್ಮಾನ್ ಖಾನ್ ಜತೆಗಿನ ಚಿತ್ರದಲ್ಲೂ ನಟಿಸಲಿದ್ದಾರೆ. ಇದರೊಂದಿಗೆ ಆಯುಷ್ಮಾನ್ ಖುರಾನಾ ಜತೆ ಇದೇ ಮೊದಲ ಬಾರಿಗೆ ಹಾರರ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬ್ಯುಸಿ ನಡುವೆ ಬಾಲ್ಯ ಸ್ನೇಹಿತೆಯನ್ನು ಮರೆಯದ ರಶ್ಮಿಕಾ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ವಿವಾಹಕ್ಕೆ ಆಗಮಿಸಿ ಗೆಳತಿಗೆ ಶುಭ ಕೋರಿ ಮರಳಿದ್ದಾಳೆ.

ಕೊಡವ ಸೀರೆಯಲ್ಲಿ ಇತರ ಸ್ನೇಹಿತೆಯರೊಂದಿಗೆ ಫೋಟೋಕ್ಕೂ ಪೋಸ್ ನೀಡಿ ಗಮನ ಸೆಳೆದ ರಶ್ಮಿಕಾ ಇದಕ್ಕೂ ಮುನ್ನ ತಮ್ಮ ಕುಟುಂಬ ಮಾಲೀಕತ್ವದ ಸೆರೆನಿಟಿ ಹಾಲ್‌ನಲ್ಲಿ ತೂಗುದೀಪ ಬೆಳಗಿ ಕಾವೇರಿ ಮಾತೆಗೆ ನಮಿಸಿದ್ದು ವಿಶೇಷ.

ಈ ಸಂದರ್ಭ ವೀಡಿಯೋ ಒಂದನ್ನು ಮಾಡಿರುವ ರಶ್ಮಿಕಾ ಕೊಡಗಿಗೆ ಬಂದಾಗ ಎಲ್ಲರೊಂದಿಗೆ ಮಾತನಾಡಬೇಕೆನಿಸಿತು. ಈತನಕ ನಿಮ್ಮೆಲ್ಲರ ಆಶೀರ್ವಾದದಿಂದ ಮುಂದೆ ಬಂದಿರುವೆ, ಮುಂದಿಯೂ ಕಾವೇರಿ ಮಾತೆ, ಇಗ್ಗುತ್ತಪ್ಪ ದೇವರ ಅಶೀರ್ವಾದದೊಂದಿಗೆ ಕಷ್ಟಪಟ್ಟು ಮತ್ತಷ್ಟು ಮುಂದೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿ, ಮುಂದೆಯೂ ಎಲ್ಲರ ಹಾರೈಕೆ ಬಯಸುವುದಾಗಿ ಸಂದೇಶ ಹರಿಯಬಿಟ್ಟಿದ್ದಾರೆ.

ಈ ವೀಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇವರ ಇತರೆಡೆಯ ಅಭಿಮಾನಿಗಳು ಫಾಲೋರ‍್ಸ್, ಇದು ಯಾವ ಭಾಷೆ, ಏನು ಮಾತನಾಡುತ್ತಿರುವುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೂ ಪ್ರತ್ಯುತ್ತರ ನೀಡಿರುವ ರಶ್ಮಿಕಾ ‘ಇದು ನನ್ನ ಮಾತೃಭಾಷೆ ಯಾಗಿದ್ದು, ಕೊಡವ ತಕ್ಕ್ ಎಂದು ಕರೆಯಲಾಗುತ್ತದೆ. ನಾನು ಹುಟ್ಟಿ ಬೆಳೆದಿದ್ದು ಕೊಡಗಿನಲ್ಲಿ, ಕೊಡವ ಭಾಷೆ, ಸುಂದರವಾದ ಹಾಗೂ ಪ್ರೀತಿಸುವ ಭಾಷೆಯಾಗಿದ್ದು, ಇದು ಧ್ವನಿಸುತ್ತದೆ. ನಾನು ವೀಡಿಯೋದಲ್ಲಿ ಹೇಳಿದ್ದನ್ನು ತಿಳಿಯಲು ನಿಮಗೆ ಈ ಭಾಷೆಯ ಅರಿವು ಇರಬೇಕು. ಇಲ್ಲವೇ ಕೊಡವ ಸ್ನೇಹಿತರಿರಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. -ಶಶಿ