(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜು. ೨: ಎಲ್ಲವೂ ಸರಿಯಾಗಿ ನಡೆದಿದ್ದರೆ ಈ ವೇಳೆಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸದಸ್ಯರ ಆಡಳಿತ ಅವಧಿ ಮೂರು ವರ್ಷ ಪೂರ್ಣಗೊಳ್ಳುತ್ತಿತ್ತು. ೨೦೨೧ಕ್ಕೆ ಅವಧಿ ಮುಗಿದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಇದುವರೆಗೆ ನಡೆದಿಲ್ಲ. ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಗುದ್ದಾಟದಿಂದ ಚುನಾವಣೆ ನಡೆಯದೆ ಜನಪ್ರತಿನಿಧಿಗಳಿಲ್ಲದೆ ಆಡಳಿತವನ್ನು ಅಧಿಕಾರಿಗಳೇ ನಡೆಸುತ್ತಿದ್ದಾರೆ.
ಹೈಕೋರ್ಟ್ ಗೆ ನೀಡಿದ ನಿಗದಿತ ಅವಧಿಯಲ್ಲಿ ಚುನಾವಣೆ ಹಾಗೂ ಮೀಸಲಾತಿ ನಿಗದಿಪಡಿಸದ ಸರ್ಕಾರದ ನಡೆಯನ್ನು ಆಕ್ಷೇಪಿಸಿ ಚುನಾವಣಾ ಆಯೋಗವು ಹೈಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಇದೀಗ ಜುಲೈ ೧೧ಕ್ಕೆ ವಿಚಾರಣೆ ಮುಂದೂಡಲಾಗಿದೆ. ಕಳೆದ ಮೂರು ವರ್ಷಗಳಿಂದ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಗುದ್ದಾಟದಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯದೆ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ಆದಷ್ಟು ಬೇಗ ಮೀಸಲು ನಿಗದಿಪಡಿಸುವುದಾಗಿ ಹೇಳಿ ಹೈಕೋರ್ಟ್ ಅರ್ಜಿ ಇತ್ಯರ್ಥ ಪಡಿಸಲಾಗಿತ್ತು.ಆದರೆ ಇದುವರೆಗೆ ಸರ್ಕಾರ ಚುನಾವಣೆ ನಡೆಸುವ ಗೋಜಿಗೆ ಹೋಗಿಲ್ಲ.ಇದೀಗ ಹೈಕೋರ್ಟ್ನಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಗುದ್ದಾಟಕ್ಕೆ ‘ಬ್ರೇಕ್’ ಬಿದ್ದರೆ ಮಾತ್ರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯುವುದು. ಇಲ್ಲದಿದ್ದರೆ ಮತ್ತೆರಡು ತಿಂಗಳು ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ.
ಕ್ಷೇತ್ರ ಪುನರ್ವಿಂಗಡಣೆ ಕೊಡಗಿನಲ್ಲಿ ಎಡವಟ್ಟು!
ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ಪುನರ್ವಿಂಗಡಣೆೆಯಲ್ಲಿ ಸೀಮಾ ಗಡಿ ನಿರ್ಣಯ ಆಯೋಗದಿಂದ ಮತ್ತೆ ಎಡವಟ್ಟು ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಸಕರ ಪ್ರಯತ್ನದಿಂದ ಮತ್ತೆ ೨೯ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮರುಸ್ಥಾಪನೆಯಾಗಿದೆ. ಕೆಲವೊಂದು ತಾಲೂಕು ಪಂಚಾಯತ್ ಕ್ಷೇತ್ರಗಳ ನಿಗದಿ ಮಾಡುವಾಗ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯನ್ನೇ ಸೇರಿಸಲಾಗಿದೆ. ವೀರಾಜಪೇಟೆ ತಾಲೂಕಿನ ಕರಡಿಗೋಡು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಿದ್ದಾಪುರ, ಗುಹ್ಯ, ಕರಡಿಗೋಡು, ಕಣ್ಣಂಗಾಲ ಹಚ್ಚಿನಾಡು, ಯಡೂರು ವ್ಯಾಪ್ತಿಯನ್ನು ಸೇರಿಸಲಾಗಿದೆ.
ತಾಲೂಕು ಪಂಚಾಯತ್ ಕ್ಷೇತ್ರಕ್ಕೂ ಕೂಡ ಜಿಲ್ಲಾ ಪಂಚಾಯತ್ ಕ್ಷೇತ್ರದ ಭಾಗವನ್ನು ಸೇರಿಸಿ ಎಡವಟ್ಟು ಮಾಡಲಾಗಿದೆ. ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕಿಂತ ಕಡಿಮೆ ಮತದಾರರು ಇರಬೇಕು.ಆದರೆ ಸೀಮಾ ಗಡಿನಿರ್ಣಯ ಆಯೋಗವು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಒಂದೇ ಗ್ರಾಮಗಳ ವ್ಯಾಪ್ತಿಯನ್ನು ಸೇರಿಸಿ ಎಡವಟ್ಟು ಮಾಡಲಾಗಿದೆ.ಕುಶಾಲನಗರ ಹೆಬ್ಬಾಲೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮರೂರು, ಹುಲಸೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಮತ್ತು ಮಣಜೂರು ಗ್ರಾಮಗಳನ್ನು ಸೇರಿಸಲಾಗಿದೆ.
(ಮೊದಲ ಪುಟದಿಂದ) ಆದರೆ ಹೆಬ್ಬಾಲೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೂ ಕೂಡ ಹೆಬ್ಬಾಲೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯನ್ನೇ ಸೇರಿಸಿ ಸೀಮಾಗಡಿ ನಿರ್ಣಯ ಆಯೋಗವು ಎಡವಟ್ಟು ಮಾಡಲಾಗಿದೆ. ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ (ನರಿಯಂದಡ) ಜಿಲ್ಲಾ ಪಂಚಾಯತ್ ಕ್ಷೇತ್ರದ ಭಾಗಗಳನ್ನೇ ಕಕ್ಕಬ್ಬೆ (ಕುಂಜಿಲ) ತಾಲೂಕು ಪಂಚಾಯತ್ ಕ್ಷೇತ್ರಕ್ಕೂ ಕೂಡ ಸೇರಿಸಲಾಗಿದೆ. ಅದೇ ರೀತಿಯಲ್ಲಿ ಭಾಗಮಂಡಲ ಜಿಲ್ಲಾ ಪಂಚಾಯತ್ ಕ್ಷೇತ್ರದ ಭಾಗವನ್ನೇ ಭಾಗಮಂಡಲ ತಾಲೂಕು ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲೇ ಸೇರಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳನ್ನೇ ಹಂಡ್ಲಿ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದೆ. ಅದೇ ರೀತಿಯಲ್ಲಿ ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಭಾಗವನ್ನೇ ಮಾದಾಪುರ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸೇರಿಸಲಾಗಿದೆ.ಸಾಮಾನ್ಯವಾಗಿ ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರ ಎರಡು ತಾಲೂಕು ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯನ್ನೊಳ ಗೊಂಡಿರುತ್ತಿತ್ತು.
ಪೊನ್ನAಪೇಟೆ ಕ್ಷೇತ್ರ ಬದಲಾಗುವ ಸಾಧ್ಯತೆ !
ಜಿಲ್ಲೆಯ ಪೊನ್ನಂಪೇಟೆ ತಾಲೂಕಿಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಶಾಸಕ ಎ.ಎಸ್ ಪೊನ್ನಣ್ಣ ಅವರ ಪ್ರಯತ್ನದಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿ ಸಲಾಗಿದೆ. ಆದರೂ ಅಧಿಕೃತವಾಗಿ ಇದುವರೆಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಯಾಗಿ ಕಾರ್ಯಾರಂಭ ಮಾಡಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರದ ಪುನರ್ವಿಂಗಡಣೆ ಪಟ್ಟಿಯಲ್ಲಿ ಪೊನ್ನಂಪೇಟೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ಎಂದು ಘೋಷಿಸಲಾಗಿದೆ. ಒಂದು ವೇಳೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯೊಳಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯೂ ಅಧಿಕೃತವಾಗಿ ಪಟ್ಟಣ ಪಂಚಾಯಿತಿಯಾಗಿ ಕಾರ್ಯಾರಂಭ ಮಾಡಿದರೆ, ಪೊನ್ನಂಪೇಟೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರವನ್ನು ಮತ್ತೆ ಪುನರ್ವಿಂಗಡಣೆ ಮಾಡಬೇಕಾಗುತ್ತದೆ.
ಮರು ವಿಂಗಡಣೆಯ ಪಟ್ಟಿ ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಕೆಯಾಗಿದೆ. ನ್ಯಾಯಾಲಯದಲ್ಲಿ ಮರು ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಗಿದ ಮೇಲೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸುತ್ತೇವೆ ಎಂದಿದ್ದಾರೆ.
ಪುನರ್ ವಿಂಗಡಣೆ ರಾಜ್ಯಮಟ್ಟದಲ್ಲಾಗಿದ್ದು ಪೊನ್ನಂಪೇಟೆ ಈ ಹಿಂದಿನAತೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಹೊಂದಿದ್ದು ಚುನಾವಣೆ ಘೋಷಣೆಯ ಮುಂಚಿತವಾಗಿ ಒಂದೊಮ್ಮೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಗೊಂಡರೆ ಕ್ಷೇತ್ರವನ್ನು ಮರು ಪರಿಶೀಲಿಸಲಾಗುವುದೇ ಹೊರತು ಈಗ ಸದ್ಯಕ್ಕೆ ಬದಲಾವಣೆ ಇಲ್ಲ ಎಂದು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಹೇಳಿದ್ದಾರೆ.