ಚೆಟ್ಟಳ್ಳಿ, ಜು. ೨: ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ತಾರಕಕ್ಕೇರಿ ಮಹಿಳೆಯನ್ನು ಹಲ್ಲೆಗೈದು ಕೊಲೆ ಮಾಡಿದ ಘಟನೆ ಚೆಟ್ಟಳ್ಳಿ ಸಮೀಪದ ತೋಟವೊಂದರ ¯ಠಿÊನ್ಮನೆಯಲ್ಲಿ ೩ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಮಿಕ ಮಹಿಳೆ ರತ್ನ (೪೬) ಸಾವನ್ನಪ್ಪಿದ್ದು, ಹಲ್ಲೆಗೈದು ಕೊಲೆ ಮಾಡಿದ ಆರೋಪದಡಿ ಜೊತೆಗಿದ್ದ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ಗೊಳಪಡಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಚೆಟ್ಟಳ್ಳಿಯ ಹರೀಶ್ ಅಪ್ಪಣ್ಣ ಎಂಬವರ ತೋಟಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದ ಇವರಿಬ್ಬರು ಅಲ್ಲಿನ ಲೈನ್ಮನೆಯಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದರು. ಪ್ರಸಾದ್ ಹಾಗೂ ರತ್ನ ಈ ಹಿಂದೆ ಕಗ್ಗೋಡ್ಲಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಯಾದ ರತ್ನಳ ಪತಿ ೪ ವರ್ಷದ ಹಿಂದೆ ಮೃತಪಟ್ಟಿದ್ದು, ಅವರ ಮಕ್ಕಳು ಬೇರೆ ಕಡೆಯಲ್ಲಿ ನೆಲೆಸಿದ್ದರು.
ಕೆಲಸ ಮಾಡುತ್ತಿದ್ದಾಗ ರತ್ನಳಿಗೆ ಪ್ರಸಾದ್ ಪರಿಚಯವಾಗಿದ್ದು, ಇವರಿಬ್ಬರು ಒಟ್ಟಾಗಿ ವಾಸ ಮಾಡಲಾರಂಭಿಸಿ ದ್ದಾರೆ. ಮದ್ಯದ ಚಟಕ್ಕೆ ದಾಸರಾಗಿದ್ದ ಇಬ್ಬರು ಆಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಜೂನ್ ೩೦ ರಂದು ರಾತ್ರಿ ಇಬ್ಬರು ಮದ್ಯಸೇವಿಸಿದ್ದು, ಈ ಸಂದರ್ಭ ಗಲಾಟೆ ನಡೆದು ಪ್ರಸಾದ್ ರತ್ನಳ ಮೇಲೆ ಹಲ್ಲೆಗೈದಿದ್ದು, ಈ ವೇಳೆ ರತ್ನ ಕುಸಿದು ಬಿದ್ದಿದ್ದಾರೆ. ಮರುದಿನ ನೋಡಿದಾಗ ಸಾವನ್ನಪ್ಪಿರುವುದು ಪ್ರಸಾದ್ಗೆ ತಿಳಿದು ಬಂದಿದೆ.
ನಂತರ ಅಲ್ಲಿಂದ ಪರಾರಿಯಾದ ಆರೋಪಿ ಕಗ್ಗೋಡ್ಲಿನ ತನ್ನ ಮನೆಗೆ ತೆರಳಿ ಚೆಟ್ಟಳ್ಳಿಯ ತೋಟದ ಮಾಲೀಕರಿಗೆ ಮಹಿಳೆ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆೆ. ಸಂಶಯಗೊAಡ ತೋಟದ ಮಾಲೀಕ ರತ್ನಳ ತಮ್ಮನಿಗೆ ಕರೆಮಾಡಿ ಮಾಹಿತಿ ನೀಡಿದ ಮೇರೆಗೆ ಚೆಟ್ಟಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ರತ್ನಳ ತಮ್ಮ, ತಾಯಿ ಹಾಗೂ ತೋಟದ ಮಾಲೀಕರೊಂದಿಗೆ ಲೈನ್ ಮನೆಗೆ ತೆರಳಿ ಪರಿಶೀಲಿಸಿದಾಗ ಇಬ್ಬರು ವಾಸವಿದ್ದ ಕೋಣೆಗೆ ಬೀಗ ಹಾಕಲಾಗಿತ್ತು. ಪಕ್ಕದ ಕೋಣೆಯಲ್ಲಿ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ದೇಹದ ಕೆಲವೆಡೆ ಗಾಯಗಳ ಕಲೆಯೂ ಕಂಡುಬAದಿದೆ. ಕಳೆದ ಭಾನುವಾರ ರಾತ್ರಿ ಹತ್ಯೆಯಾಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಮಡಿಕೇರಿ ಗ್ರಾಮಾಂತರ ಠಾಣೆಯ ಡಿವೈಎಸ್ಪಿ ಮಹೇಶ್, ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಮಡಿಕೇರಿ ಗ್ರಾಮಾಂತರ ಠಾಣೆಯ ಉಪನೀರೀಕ್ಷಕ ಶ್ರೀನಿವಾಸ್, ವೆಂಕಟ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
-ಕರುಣ್ ಕಾಳಯ್ಯ