ಕೂಡಿಗೆ, ಜು. ೨: ವಿವಿಧ ಕಾರಣಗಳಿಂದ ೨ ಬಾರಿ ಮುಂದೂಡಲ್ಪಟ್ಟು ಸೋಮವಾರ ನಿಗದಿಯಾಗಿದ್ದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಮೂರನೇ ಬಾರಿಯೂ ಕೋರಂ ಕೊರತೆಯಿಂದ ನಡೆಯದೆ ಮುಂದೂಡಿಕೆಯಾಯಿತು. ಅಧ್ಯಕ್ಷೆ ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಸಭೆಗೆ ೧೪ ಸದಸ್ಯರ ಪೈಕಿ ೮ ಮಂದಿ ಗೈರಾಗಿದ್ದು ಮುಂದೂಡಿಕೆಗೆ ಕಾರಣವಾಯಿತು.
ಹೆಬ್ಬಾಲೆ ಗ್ರಾ.ಪಂ. ೧೪ ಮಂದಿ ಸದಸ್ಯರನ್ನು ಹೊಂದಿದ್ದು, ಸಭೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ೬ ಮಂದಿ ಸದಸ್ಯರು ಮಾತ್ರ ಹಾಜರಿದ್ದರು, ಉಳಿದ ೮ ಸದಸ್ಯರು ಗ್ರಾಮ ಪಂಚಾಯಿತಿಗೆ ಅಗಮಿಸಿದರೂ ಸಭೆ ನಡೆಯುವ ಸಭಾಂಗಣಕ್ಕೆ ಅಗಮಿಸದೆ, ಅಭಿವೃದ್ಧಿ ಅಧಿಕಾರಿಯ ಕೊಠಡಿಯಲ್ಲಿ ಕುಳಿತು ಅಸಹಾಕಾರ ತೋರಿದ್ದು ಕಂಡು ಬಂತು.
ಕಳೆದ ಬಾರಿ ನಡೆದ ಸಭೆಯಲ್ಲಿ ಮತ್ತು ವಿಶೇಷ ತುರ್ತು ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಅಭಿವೃದ್ಧಿ ಅಧಿಕಾರಿಯನ್ನು ಸಾಮಾನ್ಯ ಸಭೆಗೆ ಕರೆಸುವ ತೀರ್ಮಾನ ಕೈಗೊಂಡಿದ್ದರೂ ಹಿಂದಿನ ಅಭಿವೃದ್ಧಿ ಅಧಿಕಾರಿ ಸಭೆಗೆ ಬಂದಿಲ್ಲದ ಬಗ್ಗೆ ಆಕ್ಷೇಪಿಸಿ ಸದಸ್ಯರು ಗೈರಾದರು. ಈ ಕುರಿತು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಲು ಕೋರಲಾಗಿತ್ತು. ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಅಭಿವೃದ್ಧಿ ಅಧಿಕಾರಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಂಡ ಬಗ್ಗೆ ಮತ್ತು ಬಿಲ್ ಪಾವತಿಯ ಬಗ್ಗೆ, ೧೫ ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಗೆ ಸಂಬAಧಿಸಿದAತೆ ಕಾಮಗಾರಿಗಳ ಪಟ್ಟಿಯನ್ನು ಸಭೆಯ ನೋಂದಣಿ ಪುಸ್ತಕದಲ್ಲಿ ನೋಂದಣಿ ಮಾಡಿಸಿದರೂ ಹಿಂದಿನ ಅಭಿವೃದ್ಧಿ ಅಧಿಕಾರಿ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಸಿದ್ಧಗೊಳಿಸಿಲ್ಲ. ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆದಿಲ್ಲ. ಈ ಕಾರಣಕ್ಕಾಗಿ ಹಿಂದಿನ ಅಧಿಕಾರಿಯನ್ನು ಕರೆಸಿ ಚರ್ಚಿಸುವ ಉದ್ದೇಶವಾಗಿತ್ತು ಎಂದು ಗೈರಾದ ಸದಸ್ಯರು ಮಾಹಿತಿ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಅರುಣ ಕುಮಾರಿ ಮಾತನಾಡಿ, ಹಿಂದಿನ ಸಭೆಯ ತೀರ್ಮಾನದಂತೆ ಅಭಿವೃದ್ಧಿ ಅಧಿಕಾರಿಗೆ ಪತ್ರ ವ್ಯವಹಾರ ಮಾಡಿ ಸಭೆಗೆ ಬರುವಂತೆ ತಿಳಿಸಲಾಗಿದೆ ಎಂದ ಅವರು, ಸದಸ್ಯರ ಸಹಕಾರ ಇಲ್ಲದೆ ಗ್ರಾಮದ ಅಭಿವೃದ್ಧಿ ಮುಂದುವರೆಸಲು ಅಸಾಧ್ಯ. ಸದಸ್ಯರ ಸಹಕಾರದೊಂದಿಗೆ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.