ಮಡಿಕೇರಿ, ಜೂ. ೩೦: ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿ-೨೭ರ ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ರಸ್ತೆ ಮಧ್ಯೆ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.
ಪ್ರತೀ ವರ್ಷವೂ ಮಳೆಗಾಲದಲ್ಲಿ ಈ ಸ್ಥಳ ಕೆರೆಯಂತಾಗುತ್ತಿದ್ದು, ರಸ್ತೆ ಮೇಲೆ ನಿಂತ ನೀರಿನಿಂದಾಗಿ ನಡು ರಸ್ತೆಯಲ್ಲಿ ಬೃಹತ್ಗಾತ್ರದ ೪-೫ ಗುಂಡಿಗಳು ಬಿದ್ದು ವಾಹನ ಸಂಚಾರ ದುಸ್ಥರವಾಗಿದೆ. ರಸ್ತೆಯ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದ್ದು, ಈ ಸಮಸ್ಯೆ ತಲೆದೋರಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಗೋಚರಿ ಸದೆ ವಾಹನಗಳು ನೇರವಾಗಿ ಬಂದು ಗುಂಡಿಗೆ ಬೀಳುತ್ತಿದ್ದು, ಶನಿವಾರ ರಾತ್ರಿ ಕಾರೊಂದರ ೨ ಚಕ್ರಗಳು ಪಂಕ್ಚರ್ ಆಗಿದೆ. ಆಟೋರಿಕ್ಷಾ ಸೇರಿದಂತೆ ಹಲವು ವಾಹನಗಳ ಬಿಡಿ ಭಾಗಗಳು ಈ ಗುಂಡಿ ರಸ್ತೆಯಲ್ಲಿ ಸಂಚರಿಸಿ ಹಾನಿಯಾಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಅಷ್ಟೆ ಅಲ್ಲದೆ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಅಧಿಕವಾಗಿದೆ.
ಇದೇ ಸ್ಥಳದಲ್ಲಿ ಬಸ್ ತಂಗು ದಾಣವೂ ಇದ್ದು ಸ್ಥಳೀಯರು ಬಸ್ ಗಾಗಿ ಕಾದು ನಿಲ್ಲಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾ ಗಿದೆ. ರಸ್ತೆಯಲ್ಲಿ ನಿಂತ ನೀರಿನ ಮೇಲೆ ವೇಗವಾಗಿ ಚಲಿಸುವ ವಾಹನಗಳಿಂದ ಎರಚಲ್ಪಡುವ ಕೆಸರು ಮಿಶ್ರಿತ ನೀರು, ರಸ್ತೆಬದಿ ಬಸ್ಗಾಗಿ ಕಾಯುವ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳ ಮೇಲೆ ಬೀಳುತ್ತಿದೆ.
ರಸ್ತೆ ಸಮಸ್ಯೆ ಬಗ್ಗೆ ಹಲವು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಯು ಹನೀಫ್ ಹಾಗೂ ಸ್ಥಳೀಯರಾದ ಪಿಯೂಸ್ ಪೆರೆರಾ ಆರೋಪಿಸಿದ್ದಾರೆ.
ಇನ್ನಾದರೂ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
- ಲತೀಶ್ ಪೂಜಾರಿ