ವೀರಾಜಪೇಟೆ, ಜೂ. ೩೦: ವೀರಾಜಪೇಟೆ ಕಾವೇರಿ ಕಾಲೇಜು ಸಮೀಪ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಉದ್ದೇಶಕ್ಕೆ ಕಂದಾಯ ಇಲಾಖೆ ಮೂಲಕ ನ್ಯಾಯಾಂಗ ಇಲಾಖೆಯ ಪ್ರಿನ್ಸಿಪಾಲ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರಿಗೆ ೧.೫ ಎಕರೆ ಜಾಗದ ದಾಖಲೆಯನ್ನು ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಹಸ್ತಾಂತರ ಮಾಡಿದ್ದಾರೆ.

ಟೆಂಡರ್ ಪ್ರಕ್ರಿಯೆ ನಡೆಸಿ ಯೋಜನೆ ಚಾಲನೆಗೆ ಕ್ರಮ ವಹಿಸಲಾಗಿದ್ದು, ಕಾಮಗಾರಿ ಕುರಿತು ನ್ಯಾಯಾಧೀಶರು ಸೂಕ್ತ ನಿರ್ದೇಶನ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಹೆಸರಿನಲ್ಲಿದ್ದ ೬/೨ ಸರ್ವೆ ನಂಬರ್‌ನಲ್ಲಿ ಕಾಯ್ದಿರಿಸಿದ್ದ ೧.೫ ಎಕರೆ ಜಾಗವನ್ನು ಕರ್ನಾಟಕ ಭೂ ಮಂಜೂರಾತಿ ನಿಯಮದಂತೆ ನ್ಯಾಯಾಂಗ ಇಲಾಖೆಯ ಪ್ರಿನ್ಸಿಪಾಲ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಮಂಜೂರು ಮಾಡಲಾಗಿದೆ.

ರಾಜ್ಯ ಸರ್ಕಾರ ೩೦ ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿತ್ತು. ಈ ಮೂಲಕ ೫ ಅಂತಸ್ತಿನ ನ್ಯಾಯಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ವಕೀಲ, ಕಕ್ಷಿದಾರ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆಯೊಂದಿಗೆ ಉತ್ತಮ ಮೂಲ ಸೌಕರ್ಯ ದೊರೆಯುವಂತ ಯೋಜನೆ ರೂಪಿಸಲಾಗಿದೆ. ಜನಸಂಖ್ಯೆ, ಹೆಚ್ಚುತ್ತಿರುವ ಕೇಸ್‌ಗಳ ಸಂಖ್ಯೆ ಆಧರಿಸಿ ವಿಶಾಲವಾದ ಸಭಾಂಗಣ ನಿರ್ಮಿಸಲು ಮುಂದಾಗಿದೆ. ವೀರಾಜಪೇಟೆ ಪಟ್ಟಣದಿಂದ ಸುಮಾರು ೧.೫ ಕಿ. ಮೀ. ದೂರವಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಪಟ್ಟಣದ ಲೋಕೋಪಯೋಗಿ ಕಟ್ಟಡದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.