ಸುಂಟಿಕೊಪ್ಪ, ಜೂ. ೩೦: ಹಾರಂಗಿ ಹಿನ್ನೀರಿನಲ್ಲಿ ಈಜಲು ಹೋದ ಯುವಕ ಕಣ್ಮರೆಯಾಗಿರುವ ಘಟನೆ ಹಾದ್ರೆ ಹೇರೂರು ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿ ನಿವಾಸಿ ಶಶಿಕುಮಾರ್ (೩೦) ಕಣ್ಮರೆಯಾದ ಯುವಕ. ೧೫ ಜನ ಯುವಕರ ತಂಡ ಕೊಡಗು ಜಿಲ್ಲೆಗೆ ಶನಿವಾರದಂದು ಪ್ರವಾಸಕ್ಕೆಂದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಬಂದಿತ್ತು. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಯುವಕರು ಭಾನುವಾರ ಮೈಸೂರಿಗೆ ಹಿಂದಿರುಗಬೇಕಿತ್ತು. ಮಾರ್ಗಮಧ್ಯೆ ಹಾರಂಗಿ ಹಿನ್ನೀರು ಪ್ರದೇಶವಾದ ಹೇರೂರು ಭಾಗಕ್ಕೆ ಬಂದಿದ್ದಾರೆ.

ಈ ವೇಳೆ ಶಶಿಕುಮಾರ್ ಹಿನ್ನೀರಿನಲ್ಲಿ ಈಜಲು ತೆರಳಿದ್ದು, ಈ ಸಂದರ್ಭ ಮುಳುಗಿ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಜೊತೆಗಿದ್ದ ಸ್ನೇಹಿತರು ಪಾರು ಮಾಡಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ನಂತರ ಪೊಲೀಸರಿಗೆ ಯುವಕರು ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ದಳ, ನುರಿತ ಈಜುಗಾರರ ಸಹಕಾರದೊಂದಿಗೆ ಪತ್ತೆ ಕಾರ್ಯಾಚರಣೆಗೆ ಮುಂದಾದರು. ಆದರೆ, ಬಿರುಸಿನ ಮಳೆ, ಕತ್ತಲು ಆವರಿಸಿದ ಪ್ರತಿಕೂಲ ಹವಾಮಾನದ ಹಿನ್ನೆಲೆ ಯುವಕನ ಸುಳಿವು ಇದುವರೆಗೆ ದೊರೆತ್ತಿಲ್ಲ. ತಾ. ೧ ರಂದು (ಇಂದು) ಪತ್ತೆ ಕಾರ್ಯ ಮುಂದುವರೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.