ಕೇದಾರನಾಥ ಬಳಿ ಭಾರಿ ಹಿಮಪಾತ
ರುದ್ರಪ್ರಯಾಗ, ಜೂ. ೩೦: ಉತ್ತರಾಖಂಡದ ಕೇದಾರನಾಥ ದೇವಾಲಯದ ಸಮೀಪದಲ್ಲಿರುವ ಗಾಂಧಿ ಸರೋವರದ ಬಳಿ ಭಾನುವಾರ ಭಾರಿ ಪ್ರಮಾಣ ಹಿಮಪಾತ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ೫ ಗಂಟೆ ಹೊತ್ತಿಗೆ ಗಾಂಧಿ ಸರೋವರದ ಬಳಿ ಹಿಮಪಾತ ಸಂಭವಿಸಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ರುದ್ರ ಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ‘ಕೇದಾರನಾಥ ದೇವಾ ಲಯಕ್ಕೆ ಜೂನ್ ೬ ರವರೆಗೆ ೭ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈಗ ಆಗಿರುವ ಹಿಮಪಾತ ಎಚ್ಚರಿಕೆಯ ಗಂಟೆಯಾಗಿದೆ' ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ, ಮೇ ೧೦ ರಂದು ಆರಂಭವಾದ ಪ್ರಸಿದ್ಧ ೧೧ನೇ ಜ್ಯೋತಿರ್ಲಿಂಗ ಎನಿಸಿರುವ ಕೇದಾರ ನಾಥಕ್ಕೆ ೨೮ ದಿನಗಳಲ್ಲಿ ಬರೋಬ್ಬರಿ ೭,೧೦,೬೯೮ ಭಕ್ತರು ಭೇಟಿ ನೀಡಿದ್ದಾರೆ.
ನಿಗಮದಲ್ಲಿ ಹಗರಣ : ರೂ. ೧೦ ಕೋಟಿ ಮುಟ್ಟುಗೋಲು
ಬೆಂಗಳೂರು, ಜೂ. ೩೦: ಕರ್ನಾಟಕ ಮಹಿರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು, ಚಿನ್ನಾಭರಣ, ಹೊಟೇಲ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಖಾತೆಗಳೂ ಸೇರಿ ಒಟ್ಟು ೧೯೭ ಖಾತೆಗಳಿಂದ ಅಂದಾಜು ರೂ. ೧೦ ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರೋಪಿಗಳಿಂದ ರೂ. ೧೪ ಕೋಟಿ, ಬ್ಯಾಂಕ್ಗಳಲ್ಲಿ ರೂ. ೧೦ ಕೋಟಿ ಮುಟ್ಟುಗೋಲು ಹಾಗೂ ರೂ. ೪ ಕೋಟಿ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದು, ಇದುವರೆಗೂ ಈ ಪ್ರಕರಣದಲ್ಲಿ ರೂ. ೨೮ ಕೋಟಿ ಜಪ್ತಿ ಮಾಡಿಕೊಂಡAತೆ ಆಗಿದೆ ಎಂದು ಎಸ್ಐಟಿ ಪೊಲೀಸರು ಹೇಳಿದರು. ಹೈದರಾಬಾದ್ಗೆ ತೆರಳಿರುವ ಎಸ್ಐಟಿ ಪೊಲೀಸರು ಮತ್ತೊಬ್ಬ ಆರೋಪಿ ಶ್ರೀನಿವಾಸ್ ಎಂಬವರನ್ನು ಬಂಧಿಸಿದ್ದಾರೆ. ಶ್ರೀನಿವಾಸ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆ ಆಗಿದೆ. ಕಳೆದ ವಾರ ಬಂಧಿಸಿರುವ ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಾಯಿತೇಜ ಹಾಗೂ ತೇಜ ತಮ್ಮಯ್ಯ ಅವರನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಾರ್ತಿ ಶ್ರೀನಿವಾಸ್ ಎಂಬಾತ ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಜಂಟಿ ಸ್ಪರ್ಧೆ ಖಚಿತಗೊಳಿಸಿದ ಶರದ್ ಪವಾರ್
ಪುಣೆ, ಜೂ. ೩೦: ಬರುವ ಅಕ್ಟೋಬರ್ನಲ್ಲಿ ನಡೆಯಲಿರುವ ಮಹಾರಾಷ್ಟç ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಮತ್ತು ತಮ್ಮ ಪಕ್ಷ ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದರು. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಸಣ್ಣ ಮಿತ್ರ ಪಕ್ಷಗಳ ಹಿತಾಸಕ್ತಿಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಕಾಪಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಬದಲಾವಣೆಯ ಅಗತ್ಯವಿದ್ದು, ಅದನ್ನು ನಿಭಾಯಿಸುವುದು ವಿರೋಧ ಪಕ್ಷಗಳ ಒಕ್ಕೂಟದ ನೈತಿಕ ಹೊಣೆಯಾಗಿದೆ. ಅರ್ಜುನನ ಗುರಿ (ಮಹಾಭಾರತ) ಹೇಗೆ ಮೀನಿನ ಒಂದು ಕಣ್ಣಿನ ಮೇಲಿತ್ತೋ, ಹಾಗೆ ನಮ್ಮ ಕಣ್ಣುಗಳು ಮಹಾರಾಷ್ಟçದ ವಿಧಾನಸಭಾ ಚುನಾವಣೆಯತ್ತ ನೆಟ್ಟಿವೆ. ಕಾಂಗ್ರೆಸ್, ಎನ್ಸಿಪಿ (ಎಸ್ಪಿ) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಜಂಟಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿವೆ ಎಂದು ಅವರು ಪ್ರತಿಕ್ರಯಿಸಿದರು.
ನಿಗಮ-ಮಂಡಳಿಗಳ ಹಣಕಾಸು ನಿರ್ವಹಣೆ ಮೇಲೆ ನಿಗಾವಹಿಸುವಂತೆ ಸುತ್ತೋಲೆ
ಬೆಂಗಳೂರು, ಜೂ. ೩೦: ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರೂ. ಹಗರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸುವಂತೆ ಆದೇಶ ಹೊರಡಿಸಿದೆ. ಸಾರ್ವಜನಿಕ ಉದ್ದಿಮೆಗಳು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳು ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಮೇಲೆ ಬಹುಹಂತದ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸುತ್ತೋಲೆ ಹೊರಡಿಸಿದ್ದಾರೆ. ಚಾಲ್ತಿ ಖಾತೆ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಎಲ್ಲ ಬ್ಯಾಂಕ್ ಖಾತೆಗಳ ಆರಂಭಿಕ ಮತ್ತು ಅಂತ್ಯದ ಶಿಲ್ಕಿನ ಕುರಿತು ಪ್ರತಿ ತಿಂಗಳು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ಗೆ ಸ್ಥಾನ ನೀಡಿ - ಪ್ರಣವಾನಂದಶ್ರೀ
ಹಾವೇರಿ. ಜೂ. ೩೦: ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಸಿಎಂ ಸ್ಥಾನ ಬದಲಾವಣೆ ಮಾಡುವುದಾದರೆ ಬಿ.ಕೆ. ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದಶ್ರೀ ಒತ್ತಾಯಿಸಿದರು. ಇಂದು ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಬಿ.ಕೆ. ಹರಿಪ್ರಸಾದ್ ಅವರ ಹಿಂದೆ ಇಡೀ ಹಿಂದುಳಿದ ಸಮಾಜವಿದೆ. ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದೇನೆ ಸಿಎಂ ಡಿಸಿಎಂ ಸ್ಥಾನ ಬದಲಾದರೆ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನ ನೀಡಬೇಕು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದ್ರೂ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು. ೪೯ ವರ್ಷ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಇಂದಿರಾ ಗಾಂಧಿಯಿAದ ಹಿಡಿದು ಪ್ರಸ್ತುತ ಪ್ರಿಯಾಂಕಾ ಗಾಂಧಿವರೆಗೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ಈಡಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡಿದೆ. ಆದರೆ, ಬಿಜೆಪಿ ಸರ್ಕಾರವಿದ್ದಾಗ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಎಂದರು.
ಚಿತ್ರರಂಗಕ್ಕೆ ಆರ್ಥಿಕ ನೆರವಿನ ಭರವಸೆ ನೀಡಿದ ಸಿಎಂ
ಬೆAಗಳೂರು, ಜೂ. ೩೦: ಚಿತ್ರಮಂದಿರಗಳು ಮತ್ತು ಸಬ್ಸಿಡಿ ಬಗ್ಗೆ ಗಮನ ಹರಿಸಿ, ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ತಿಳಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ಸರ್ಕಾರದಿಂದ ನೀಡಲಾಗುವುದು ಎಂದರು. ಕನ್ನಡದಲ್ಲಿ ಓಟಿಟಿ ವೇದಿಕೆ ತರಲು, ಸಂಬAಧಪಟ್ಟವರ ಜೊತೆ ಮಾತನಾಡುತ್ತೀನಿ. ಡಾ. ರಾಜ್ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ಸಿಟಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಸಬ್ಇನ್ಸ್ಪೆಕ್ಟರ್ಗೆ ರೂ. ೨ ಲಕ್ಷ ದಂಡ
ಬೆAಗಳೂರು, ಜೂ. ೩೦: ವ್ಯಕ್ತಿಯೊಬ್ಬರ ಮೇಲೆ ಸಬ್ಇನ್ಸ್ಪೆಕ್ಟರ್ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪ ಸಂಬAಧ ತನಿಖೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗವು, ದೂರುದಾರನಿಗೆ ಒಂದು ತಿಂಗ ಳೊಳಗಾಗಿ ೨ ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಳೆದ ೨೦೨೧ ರಲ್ಲಿ ಸಬ್ ಇನ್ಸ್ಪೆಕ್ಟರ್ ಕೆ.ಟಿ. ಸತೀಶ ಎಂಬವರು ಸುನಿಲ್ಕುಮಾರ್ ಎಂಬ ವ್ಯಕ್ತಿಯನ್ನು ಪ್ರಕರಣವೊಂದರ ಸಂಬAಧ ಹುಡುಕುತ್ತಿದ್ದರು. ನಂತರ ಜೋಲಿ ಮೊಹಲ್ಲಾದಲ್ಲಿ ಕೊರಿಯರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ಕುಮಾರ್ನನ್ನು ಇಬ್ಬರು ಕಾನ್ಸ್ಟೇಬಲ್ಗಳೊಂದಿಗೆ ತೆರಳಿ ಬಂಧಿಸಿ ಕರೆ ತಂದು ಹಲ್ಲೆ ನಡೆಸಿದ್ದರು. ಆದರೆ ತಮಗೆ ಬೇಕಾಗಿದ್ದ ಸುನಿಲ್ ಇವರಲ್ಲ ಎಂದು ನಂತರ ಗೊತ್ತಾಗಿ ಬಿಟ್ಟು ಕಳಿಸಿದ್ದರು. ಆದರೆ ವಿನಾಕಾರಣ ಹಲ್ಲೆಗೀಡಾಗಿದ್ದ ಸುನಿಲ್ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ವೈದ್ಯಕೀಯ ಪ್ರಮಾಣ ಪತ್ರದ ಸಹಿತ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗವು ರೂ. ೨ ಲಕ್ಷ ಪರಿಹಾರ ರೂಪದಲ್ಲಿ ನೀಡಬೇಕೆಂದು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದು, ತಪ್ಪಿತಸ್ಥ ಪಿಎಸ್ಐ ವಿರುದ್ಧ ಇಲಾಖಾ ತನಿಖೆ ನಡೆಸಿದ ಬಳಿಕ ಪರಿಹಾರ ರೂಪದಲ್ಲಿ ನೀಡಲಾಗುವ ಈ ಹಣವನ್ನು ಸಬ್ ಇನ್ಸ್ಪೆಕ್ಟರ್ ವೇತನದಿಂದ ವಸೂಲಿ ಮಾಡಬೇಕೆಂದು ಹೇಳಿದೆ.