ವಿಶೇಷ ವರದಿ - ಚಂದ್ರಮೋಹನ್

ಕುಶಾಲನಗರ, ಜೂ. ೩೦: ಕೊಡಗು ಜಿಲ್ಲೆಯ ಪಟ್ಟಣಗಳಲ್ಲಿ ನಾಗಲೋಟದ ಅಭಿವೃದ್ಧಿ ಕಾಣುತ್ತಿರುವ ಕುಶಾಲನಗರ ಪಟ್ಟಣ ಸೇರಿದಂತೆ ತಾಲೂಕು ಸುತ್ತಮುತ್ತಲ ಪ್ರದೇಶಗಳು ಇತ್ತೀಚಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಪರಿವರ್ತನೆಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎನ್ನಬಹುದು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪರಾಧ ಲೋಕದ ಚಟುವಟಿಕೆಗಳು ಆಗಾಗ್ಗೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿರುವುದು ಕಾಣಬಹುದು.

ಅಲ್ಲಲ್ಲಿ ಅಕ್ರಮ ಬಡಾವಣೆಗಳ ನಿರ್ಮಾಣ, ತಮ್ಮ ಅಸ್ತಿತ್ವ ಸಾಧಿಸಲು ಕಾನೂನು ಉಲ್ಲಂಘನೆ ಮಾಡುವುದರೊಂದಿಗೆ ಭೂ ದಂಧೆಕೋರರು ಎಗ್ಗಿಲ್ಲದೆ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿರುವುದು. ತಮ್ಮ ಅಸ್ತಿತ್ವ ಸಾಧಿಸಲು ಆತ್ಮರಕ್ಷಣೆಗಾಗಿ ಪಡೆದಿರುವ ಆಯುಧಗಳ ದುರುಪಯೋಗ, ಅಕ್ರಮ ಗಾಂಜಾ ಸರಬರಾಜು ಚಟುವಟಿಕೆ, ಈ ಎಲ್ಲದರ ನಡುವೆ ಮನರಂಜನೆ ಚಟುವಟಿಕೆಗಳ ಹೆಸರಿನಲ್ಲಿ ನಡೆಯುತ್ತಿರುವ ಇಸ್ಪೀಟ್ ಅಡ್ಡೆಗಳು.. ಇವುಗಳ ನಿಯಂತ್ರಣ ಹಾಗೂ ಸ್ವಾಸ್ಥ ಸಮಾಜಕ್ಕಾಗಿ ಕುಶಾಲನಗರ ಪೊಲೀಸರು ಮಾತ್ರ ಹರಸಾಹಸ ಪಡುತ್ತಿರುವುದು ಶ್ಲಾಘನೀಯ ಅಂಶವಾಗಿದೆ.

ಕೆಲವು ದಂಧೆಗಳು ಸೇರಿದಂತೆ ಬಹುತೇಕ ಅಪರಾಧಗಳಿಗೆ ಕುಶಾಲನಗರವನ್ನು ಕೇಂದ್ರ ಸ್ಥಾನವಾಗಿ ಆಯ್ಕೆ ಮಾಡುತ್ತಿರುವುದು ಕೂಡ ಕಳೆದ ಕೆಲವು ವರ್ಷಗಳ ಬೆಳವಣಿಗೆಯಾಗಿದೆ.

ಇದಕ್ಕೆಲ್ಲ ಮೂಲ ಎಂಬAತೆ ಕುಶಾಲನಗರದಲ್ಲಿ ಮನರಂಜನೆ ಹೆಸರಿನಲ್ಲಿ ಕ್ಲಬ್ ಗಳ ಕಾರ್ಯಾಚರಣೆ ಆರಂಭಗೊAಡು ಸಮಾಜದ ಸ್ವಾಸ್ಥö್ಯ ಕೆಡಿಸುತ್ತಿದೆ.

ದಿಢೀರ್ ಶ್ರೀಮಂತಿಕೆ ಹೊಂದಬೇಕೆನ್ನುವ ಆಸೆಯಲ್ಲಿ ಕ್ಲಬ್‌ಗಳಿಗೆ ಹಗಲು ರಾತ್ರಿ ಎನ್ನದೆ ನುಗ್ಗುವ ಮಧ್ಯಮ ವರ್ಗದ ಗ್ರಾಹಕರು. ಕೈತುಂಬಾ ಹಣ ಪಡೆದುಕೊಂಡು ಕ್ಲಬ್ಬಿಗೆ ತೆರಳಿ ಬರಿಗೈಯಲ್ಲಿ ಬರುವ ಸಂಗತಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ.

ಮನೆಯ ಅಮೂಲ್ಯ ವಸ್ತುಗಳನ್ನೆಲ್ಲ ಅಡವಿಟ್ಟು ಜೂಜಾಟದಲ್ಲಿ ತೊಡಗಿಸಿ ತಮ್ಮ ಜೀವನ ಕಳೆಯುವಂತಹ ಜನರೇ ಈ ಚಟುವಟಿಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಬಹುದು.

ಕುಶಾಲನಗರದಲ್ಲಿ ಯಾವ ಹಂತಕ್ಕೆ ಜೂಜಾಟ ಮಿತಿಮೀರಿದೆ ಎಂದರೆ ಸೆಲ್ಫ್ ಡ್ರೈವಿಂಗ್ ಹೆಸರಿನಲ್ಲಿ ವಾಹನವನ್ನು ದಿನ ಬಾಡಿಗೆಗೆ ಪಡೆದು ಕೊನೆಗೆ ಅದನ್ನು ಇಸ್ಪೀಟ್ ಅಡ್ಡೆಗಳಲ್ಲಿ ಪಣಕ್ಕಿಡುವ ಮೂಲಕ ಇಸ್ಪೀಟ್ ಆಟ ಆಡುವ ವ್ಯಕ್ತಿಗಳು ಕೂಡ ಈ ವ್ಯಾಪ್ತಿಯಲ್ಲಿ ಇದ್ದಾರೆ ಎಂಬುದು ಸೋಜಿಗದ ಸಂಗತಿ.

ಸೆಲ್ಫ್ ಡ್ರೆöÊವಿಂಗ್ ಹೆಸರಿನಲ್ಲಿ ಕಾರನ್ನು ಬಾಡಿಗೆ ಪಡೆದು ಅಡವಿಟ್ಟು ಸಾವಿರ ಸಾವಿರ ರೂಗಳ ಪಣಕ್ಕೆ ಇಸ್ಪೀಟು ದಂಧೆ ಆಟ ನಡೆದಿರುವ ಪ್ರಕರಣಗಳು ನಡೆದಿವೆ.

ದಿನಕ್ಕೆ ಸಾವಿರ ರೂಗಳಂತೆ ಕಾರು ಬಾಡಿಗೆಯನ್ನು ಕಾರಿನ ಮಾಲೀಕರಿಗೆ ಕಟ್ಟಿ ಕಾರನ್ನು ಇಸ್ಪೀಟ್ ಅಡ್ಡೆ ಮಾಲೀಕನಿಗೆ ಬರೆದು ಕೊಟ್ಟ ಜನರು ಇದ್ದಾರೆ. ವಿಷಯ ತಿಳಿದ ನಂತರ ಕಾರಿನ ಮಾಲೀಕ ತನ್ನ ಕಾರನ್ನು ಹುಡುಕಿಕೊಂಡು ಇಸ್ಪೀಟ್ ಅಡ್ಡೆಗೆ ತೆರಳಿ ಪ್ರಕರಣ ಪೊಲೀಸ್ ಠಾಣೆಗೆ ಹೋಗಿರುವುದು ಕೂಡಾ ನಡೆದಿದೆ.

ಇಸ್ಪೀಟ್ ಅಡ್ಡೆಗೆ ತೆರಳಲು ಹಣದ ಕೊರತೆ ಉಂಟಾದಾಗ ದರೋಡೆಯಲ್ಲಿ ಪಾಲ್ಗೊಳ್ಳುವುದು, ಕಳ್ಳತನ ಪ್ರಕರಣದಲ್ಲಿ ಪಾಲ್ಗೊಳ್ಳುವುದು.. ಮುಂದುವರೆದು ಎಲ್ಲ ಮುಗಿದ ನಂತರ ಗಾಂಜಾ ಸೇವನೆಗೆ ಮಾರು ಹೋಗುವುದು ಅಂತಿಮ ಕಾಯಕ.

ಪೊಲೀಸರು ಎಷ್ಟೇ ಬೆನ್ನು ಬಿದ್ದರೂ ಅಪರಾಧ ಲೋಕ ಮಾತ್ರ ರಾಜಾರೋಷವಾಗಿ ತಮ್ಮ ಕಾಯಕವನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಿರುವುದು ಇಲ್ಲಿನ ನಿಗೂಢ ವಿಷಯವಾಗಿದೆ. ಇದರ ಹಿಂದೆ ಕೆಲವು ರಾಜಕೀಯ ವ್ಯಕ್ತಿಗಳು ಕೂಡ ಇಂತಹ ಚಟುವಟಿಕೆಗಳ ಪರವಾಗಿ ಪೊಲೀಸರ ಬೆನ್ನು ಬಿದ್ದಿದ್ದಾರೆ ಎನ್ನುವುದು ಇದೀಗ ಬಹಿರಂಗಗೊAಡಿದೆ.

ಕ್ಲಬ್‌ಗಳಿಗೆ ಆಟವಾಡಲು ತೆರಳಿ ಹಿಂತಿರುಗುವ ಹೊತ್ತಿಗೆ ಸೋಲಿನ ಮನಸ್ಥಿತಿಯಲ್ಲಿ ಅಮಲೇರಿ ತಾವು ಮನೆಗೆ ವಾಪಸ್ ಆಗುವ ದಾರಿಯಲ್ಲಿ ವಾಹನ ಅಪಘಾತಕ್ಕೆ ಒಳಗಾಗುವುದು ಕೂಡ ಈ ಜೂಜಾಟದ ಮಹಿಮೆಯಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜೂಜಾಟದ ಕೇಂದ್ರಗಳನ್ನು ತಕ್ಷಣ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದು ಕುಶಾಲನಗರ, ಹೊಸಕೋಟೆ ಶನಿವಾರಸಂತೆ ಮುಂತಾದ ಕಡೆ ಈಗಾಗಲೇ ಕ್ಲಬ್‌ಗಳು ಸ್ತಬ್ಧಗೊಂಡಿವೆ. ಕ್ಲಬ್ ಮಾಲೀಕರು ತಮ್ಮ ಪ್ರಭಾವವನ್ನು ಬೀರಿ ಮತ್ತೆ ತೆರೆಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ರಾಜಕೀಯದ ಒಂದು ಗುಂಪು ಜೂಜಾಟದ ಅಡ್ಡಗಳನ್ನು ಮತ್ತೆ ಆರಂಭಿಸುವ ಹುನ್ನಾರ ನಡೆಸುತ್ತಿದ್ದು, ತೆರೆಮರೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಪ್ರಭಾವದ ತಾಕೀತು ಮಾಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ.

ಶಾಸಕರ ಕಚೇರಿಯ ಕೊಠಡಿಯಲ್ಲಿ ಕ್ಷೇತ್ರ ಶಾಸಕರ ಎದುರುಗಡೆ ಎರಡು ಗುಂಪುಗಳು ಪರ ವಿರೋಧ ಘರ್ಷಣೆಗೆ ಮುಂದಾಗಿದ್ದು ಕೂಡ ಇತ್ತೀಚೆಗೆ ಬಹಿರಂಗವಾಗಿತ್ತು.

ಸಮಾಜದ ಸ್ವಾಸ್ಥö್ಯ ಹಾಳು ಮಾಡುವ ನಿಟ್ಟಿನಲ್ಲಿ ಒಂದು ಗುಂಪು ನಿರಂತರವಾಗಿ ಅಕ್ರಮ ಚಟುವಟಿಕೆಗಳ ಕಡೆಗೆ ಸಾಗುತ್ತಿರುವುದು ಮಾತ್ರ ಆತಂಕಕಾರಿ ಬೆಳವಣಿಗೆ ಆಗಿದೆ.

ಯಾವುದೇ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಮನರಂಜನೆಯ ಹೆಸರಿನಲ್ಲಿ ಇಸ್ಪೀಟ್ ಅಡ್ಡಗಳನ್ನು ತೆರೆಯಲು ಅವಕಾಶ ಕಲ್ಪಿಸುವುದಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶಕ್ತಿಗೆ ತಿಳಿಸಿದ್ದಾರೆ.ಒಂದು ವೇಳೆ ಅಕ್ರಮವಾಗಿ ಇಂತಹ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ಅದರ ಮಾಲೀಕರನ್ನು ರೌಡಿ ಲಿಸ್ಟ್ಗೆ ಸೇರಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮನರಂಜನೆ ಹೆಸರಿನಲ್ಲಿ ಕ್ಲಬ್‌ಗಳನ್ನು ತೆರೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿರುವ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಪೊಲೀಸ್ ಇಲಾಖೆ ಯಾವುದೇ ಸಂದರ್ಭ ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮೂಲಕ ಕ್ಲಬ್‌ಗಳು ಬಂದ್ ಆಗಿದ್ದರೆ ಜಿಲ್ಲೆಯ ಗಡಿಭಾಗದ ಕೊಪ್ಪ, ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಅಣಬೆಗಳಂತೆ ಕೆಲವು ಕ್ಲಬ್‌ಗಳು ತಲೆಯೆತ್ತಿ ಈ 'ಉಳಾಯಿ ಫಿದಾಯಿ' ಜೂಜು ಆಟವಾಡುತ್ತಿರುವುದು ಗೋಚರಿಸಿದೆ.

ಗಡಿ ಭಾಗಗಳಲ್ಲಿ ಕೆಲವು ರೆಸಾರ್ಟ್ಗಳಲ್ಲಿ ಕೂಡ ನಿಯಮಬಾಹಿರವಾಗಿ ಹಗಲು ರಾತ್ರಿ ಎನ್ನದೆ ಇಸ್ಪೀಟ್ ಅಡ್ಡೆಗಳ ಚಟುವಟಿಕೆಗಳನ್ನು ನಡೆಸುತ್ತಿವೆ ಎನ್ನುವ ಮಾಹಿತಿಗಳು ಹೊರ ಬಿದ್ದಿವೆ. ಬರಿಗೈಯಲ್ಲಿ ಬರುವ ಸಂದರ್ಭ ಅಲ್ಲಲ್ಲಿ ಆತ್ಮರಕ್ಷಣೆಗಾಗಿ ಪಡೆದಿರುವ ರಿವಾಲ್ವರ್, ಕೋವಿಗಳು ಕೂಡ ಸದ್ದು ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆ ಆಗಿದೆ.

ಇಂತಹ ಆಘಾತಕಾರಿ ಬೆಳವಣಿಗೆಗಳಿಗೆ ಜಿಲ್ಲಾ ಹಾಗೂ ಗಡಿ ಭಾಗದ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ಈಗಾಗಲೇ ಕಾನೂನು ಬಾಹಿರ ಕ್ಲಬ್ ಚಟುವಟಿಕೆ ಮತ್ತಿತರ ಪ್ರಕರಣಗಳ ದೂರುಗಳು ಮೈಸೂರು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕರ ಅಂಗಳಕ್ಕೂ ತಲುಪಿದೆ. ಈ ಹಂತದಲ್ಲಿ ಕಾನೂನು ಕ್ರಮ ಕೈಗೊಂಡಲ್ಲಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಶಾಶ್ವತ ಕಡಿವಾಣ ಬೀಳಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಕಳೆದ ಕೆಲವು ಸಮಯದಿಂದ ಆಯುಧಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳು ಕೂಡ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಘಟನೆಗಳನ್ನು ಕಾಣಬಹುದು.

ಕುಶಾಲನಗರ ಸೇರಿದಂತೆ ಗಡಿಭಾಗದ ಕೊಪ್ಪ, ಬೈಲುಕೊಪ್ಪ, ಕೂಡಿಗೆ, ಹೊಸಕೋಟೆ ಮುಂತಾದ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆಗಳ ಚಟುವಟಿಕೆಗಳಿಗೆ ಶಾಶ್ವತ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕೂಡಲೇ ಸನ್ನದ್ಧವಾಗಬೇಕಾಗಿದೆ.

ೆ