ವೀರಾಜಪೇಟೆ, ಜೂ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವೀರಾಜಪೇಟೆ ತಾಲೂಕು ಕಾನೂರು ವಲಯ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕುಟ್ಟ ಹಾಗೂ ಪೂಜೆಕಲ್ಲು ಕಾರ್ಯ ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ವೈದ್ಯೆ ಡಾ. ಅರ್ಚನಾ ಕಾರ್ಯಕ್ರಮ ಉದ್ಘಾಟಿಸಿ ದೈನಂದಿನ ದಿನದಲ್ಲಿ ಉತ್ತಮ ಆರೋಗ್ಯವನ್ನು ಹೇಗೆ ಕಾಪಾಡಬೇಕು, ಯೋಗದಿಂದ ಆಗುವ ಉಪಯೋಗಗಳು, ಕ್ಯಾನ್ಸರ್ ಯಾವ ರೀತಿ ಬರುತ್ತದೆ ಹಾಗೂ ಬಾರದ ಹಾಗೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು, ಡೆಂಗ್ಯೂ ಜ್ವರ ನಿಯಂತ್ರಣದ ಬಗ್ಗೆ ಹಾಗೂ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳು ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾನೂರು ಪ್ರಾಥಮಿಕ ಕೇಂದ್ರದ ಡಾ. ಶರತ್ ಮಾತನಾಡಿ, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು, ಶುಗರ್, ರಕ್ತಹೀನತೆ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಹೇಗೆ ಉಂಟಾಗುತ್ತದೆ ಹಾಗೂ ಇದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕುಟ್ಟ ಒಕ್ಕೂಟ ಅಧ್ಯಕ್ಷೆ ಸುನಂದಾ ಮಣಿ ವಹಿಸಿದ್ದರು. ವಲಯ ಮೇಲ್ವಿಚಾರಕ ಸುಜೀರ್, ಪೂಜೆಕಲ್ಲು ಸೇವಾ ಪ್ರತಿನಿಧಿ ಹೇಮಲತಾ, ಕುಟ್ಟ ಸೇವಾ ಪ್ರತಿನಿಧಿ ಸ್ವಪ್ನ, ಪೂಜೆಕಲ್ಲು ಒಕ್ಕೂಟದ ಅಧ್ಯಕ್ಷ ರಾಜೇಶ್ ಸೇರಿದಂತೆ ಜ್ಞಾನ ಜ್ಯೋತಿ ಹಾಗೂ ಭದ್ರ ೨ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು, ತಾಲೂಕು ಆರೋಗ್ಯ ಕೇಂದ್ರ ಗೋಣಿಕೊಪ್ಪ ಇಲ್ಲಿನ ಸಿಬ್ಬಂದಿಗಳು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.