ಕಣಿವೆ. ಜೂ. ೨೯: ಕೂಡಿಗೆಯ ಸೈನಿಕ ಶಾಲೆಗೆ ದೆಹಲಿಯ ರಕ್ಷಣಾ ಇಲಾಖೆ ಸೇನಾ ವಿಭಾಗದ ನೇಮಕಾತಿ ಮಹಾ ನಿರ್ದೇಶಕ ಲೆ.ಜ. ನವನೀತ್ ಸಿಂಗ್ ಸರ್ನಾ ಭೇಟಿ ನೀಡಿದರು.

ನವದೆಹಲಿಯಿಂದ ಆಗಮಿಸಿದ ಇವರು ಶಾಲೆಯ ವಿದ್ಯಾರ್ಥಿ ಗಳೊಂದಿಗೆ ಪ್ರೇರಣಾತ್ಮಕವಾದ ಸಂವಾದ ನಡೆಸಿ, ವಿದ್ಯಾರ್ಥಿಗಳು ಯುಪಿಎಸ್‌ಸಿ ಹಾಗೂ ಎನ್‌ಡಿಎ ಪರೀಕ್ಷೆಗಳನ್ನು ಎದುರಿಸಲು ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳು ಹಾಗೂ ಭಾರತೀಯ ಸಶಸ್ತç ಪಡೆಗಳಲ್ಲಿ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಸಮಗ್ರ ಮಾಹಿತಿ ನೀಡಿದರು.

ಭಾರತ ದೇಶವನ್ನು ವಿಶ್ವದಲ್ಲಿಯೇ ಶ್ರೇಷ್ಠವಾದ ದೇಶವಾಗಿ ಕಟ್ಟಲು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಉತ್ಕೃಷ್ಟ ಆಲೋಚನೆಗಳ ಕನಸಿನೊಂದಿಗೆ ದೇಶ ಪ್ರೇಮ ಮೈಗೂಡಿಸಿಕೊಳ್ಳಲು ಕರೆ ಕೊಟ್ಟರು.

ಕಾರ್ಯಕ್ರಮಕ್ಕೂ ಮುನ್ನಾ ಲೆ.ಜ. ಸರ್ನಾ ಅವರು ಶಾಲಾ ಆವರಣದಲ್ಲಿನ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಉಪಪ್ರಾಂಶುಪಾಲ ಮೊಹಮ್ಮದ್ ಶಾಜಿ ಹಾಗೂ ಶಾಲೆಯ ಶಿಕ್ಷಕರಿದ್ದರು. ಕೆಡೆಟ್ ಸಮರ್ಥ್ ಹಾಗೂ ಆರ್ಜಾಕ್ ನಿರೂಪಿಸಿದರು. ಕೆಡೆಟ್ ಶರಣಬಸು ಸ್ವಾಗತಿಸಿದರು.