ಮಡಿಕೇರಿ, ಜೂ. ೨೮ : ದಿನನಿತ್ಯ ಓಡುತ್ತಿದ್ದ ಬಸ್ ಸಂಪರ್ಕವನ್ನು ನಿಲುಗಡೆಗೊಳಿಸಿ ಏಳು ವರ್ಷ ಕಳೆದ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ಸಂಚಾರ ಪುನರಾರಂಭಿಸಿದ ಘಟನೆ ಇಂದು ನಡೆಯಿತು. ಈ ಹಿಂದೆ ಮಡಿಕೇರಿಯಿಂದ ಬೆಳಿಗ್ಗೆ ೧೦.೩೦ಕ್ಕೆ ಹೊರಟು ಸೂರ್ಲಬ್ಬಿಯ ಕಿಕ್ಕರಳ್ಳಿವರೆಗೆ ತೆರಳಿ ಮರಳಿ ಅದೇ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಹಾಗೂ ಮಡಿಕೇರಿ, ಮಾದಾಪುರ, ತಾಕೇರಿ, ಸೋಮವಾರಪೇಟೆಗೆ ತೆರಳುತ್ತಿದ್ದ ಬಸ್‌ಗಳ ಸಂಚಾರವನ್ನು ೨೦೧೮ರಲ್ಲಿ ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿತ್ತು. ಆಟೋರಿಕ್ಷಾ, ಬಾಡಿಗೆ ವಾಹನಗಳಿಗೆ ೩೦೦ ರಿಂದ ೪೦೦ರಷ್ಟು ಹಣ ನೀಡಿ ಸಂಚರಿಸ ಬೇಕಾದ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷ ಗಳಿಂದ ಬಸ್ ಸಂಚಾರ ಆರಂಭಿಸು ವಂತೆ ಮನವಿ ಮಾಡುತ್ತಲೇ ಬಂದಿದ್ದರೂ ಸಾರಿಗೆ ಸಂಸ್ಥೆಯಿAದ ಯಾವದೇ ಸ್ಪಂದನ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಾದಾಪುರ, ಶಿರಂಗಳ್ಳಿ, ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಮಂಕ್ಯ, ಕಿಕ್ಕರಳ್ಳಿ, ಹರಗ, ತಾಕೇರಿ ಗ್ರಾಮದ ಗ್ರಾಮಸ್ಥರು ಆಗಮಿಸಿ ಮಡಿಕೇರಿಯ ಸಾರಿಗೆ ಸಂಸ್ಥೆ ಘಟಕದ ದ್ವಾರದಲ್ಲಿ ಧರಣಿ ಕುಳಿತರು. ಅಧಿಕಾರಿಗಳು, ಪೊಲೀಸರು ಎಷ್ಟೇ ಮನವೊಲಿಸಿದರೂ ಜಗ್ಗದ ಗ್ರಾಮಸ್ಥರು ಧರಣಿ ಮುಂದುವರಿಸಿದರು. ಗ್ರಾಮಸ್ಥರ ಹಠಕ್ಕೆ ಮಣಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೊನೆಗೂ ಬೇಡಿಕೆಯ ಮಾರ್ಗವಾಗಿ ಬಸ್ ವ್ಯವಸ್ಥೆ ಕಲ್ಪಿಸಿದರು. ಸಂತೋಷದಿAದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಮರಳಿದರು. ಪ್ರತಿಭಟನೆ ಸಂದರ್ಭ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.