ಕೂಡಿಗೆ, ಜೂ. ೨೭: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಯ ಸಭೆಯು ಠಾಣೆಯ ಸಭಾಂಗಣದಲ್ಲಿ ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಗಂಗಾಧರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಹಾಜರಿದ್ದ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಮುಖರು ತಮ್ಮ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ತಿಳಿಸಿದರು. ಕುಂದುಕೊರತೆಗಳ ಸಭೆಯಲ್ಲಿ ಹಾಜರಿದ್ದವರ ವಿಷಯ ಗಳನ್ನು ಆಲಿಸಿದ ಪೊಲೀಸ್ ಉಪ ಅಧೀಕ್ಷಕರು ಪೊಲೀಸ್ ಕಾಯ್ದೆಯ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು. ಅಲ್ಲದೆ ಠಾಣಾ ವ್ಯಾಪ್ತಿಯ ಹಾಡಿಗಳಿಗೆ ಭೇಟಿ ನೀಡಿ ಖುದ್ದಾಗಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಕೊಂಡು ಬಗೆಹರಿಸುವ ವಿಷಯ ಗಳನ್ನು ತಿಳಿಸಿದರು. ನಂತರ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಅವರು ಮಾತನಾಡಿ, ಗ್ರಾಮಸ್ಥರು ಇಲಾಖೆಯ ನಿಯಮಗಳನ್ನು ಪಾಲಿಸುವುದು ಬಹುಮುಖ್ಯವಾಗಿರುತ್ತದೆ. ಕಾನೂನಿನ ಹಿತದೃಷ್ಟಿಯಿಂದ ಜನರ ರಕ್ಷಣೆಗೆ ನಮ್ಮ ಇಲಾಖೆ ಸದಾ ಸಿದ್ಧವಿದೆ. ಎಲ್ಲರೂ ಕಾನೂನಿಗೆ ಗೌರವ ನೀಡುವ ಮೂಲಕ ಕರ್ತವ್ಯ ವನ್ನು ನಿರ್ವಹಿಸುವುದು ಉತ್ತಮ ಎಂಬ ಸಂದೇಶವನ್ನು ನೀಡಿದರು. ಈ ಸಂದರ್ಭ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಹಾಜರಿದ್ದರು. ಕೂಡಿಗೆ, ಕೂಡುಮಂಗಳೂರು ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೪೦ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದರು.