ಸುಂಟಿಕೊಪ್ಪ, ಜೂ. ೨೭: ಶಾಲೆಗಳಲ್ಲಿ ಶಾಲಾ ಸಂಸತ್ ರಚನೆಯಿಂದ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೂ ಸಿಗಬೇಕಾದ ವಿವಿಧ ಸೌಲಭ್ಯ ಸವಲತ್ತುಗಳು ಪಡೆಯಲು ವೇದಿಕೆಯಾಗಿದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಹೇಳಿದರು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸರಕಾರಿ ಪ್ರೌಢಶಾಲಾ ಶಾಲಾ ಸಂಸತ್ ರಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿರಿಲ್ ರಾಡ್ರಿಗಸ್ ವಹಿಸಿದ್ದರು.

ಉಪಪ್ರಾಂಶುಪಾಲ ಬಾಲಕೃಷ್ಣ ನೂತನ ಸಂಸತ್ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಗ್ರಾ.ಪಂ. ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಶಬ್ಬೀರ್, ರಫೀಕ್ ಖಾನ್, ಸೋಮನಾಥ್, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸಮೂಹ ಸಂಪನ್ಮೂಲ ವ್ಯಕ್ತಿ ಸೀಮಾ, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಹಾಗೂ ಸಹ ಶಿಕ್ಷಕರು ಇದ್ದರು.