ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಸಿಐಡಿ
ಬೆಂಗಳೂರು, ಜೂ. ೨೭: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಿಐಡಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಬಾಲಕಿಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ) ಅಡಿ ಪ್ರಕರಣ ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಯಡಿಯೂರಪ್ಪ ವಿರುದ್ಧ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ತಿಳಿಸಿದ್ದಾರೆ. ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಇನ್ಸ್ಟಾಗ್ರಾಮ್ ಸಹಕಾರ ಕೋರಿದ ಕರ್ನಾಟಕ ಪೊಲೀಸರು!
ಬೆಂಗಳೂರು, ಜೂ. ೨೭: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ೧೫ ಮಂದಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ಇನ್ಸ್ಟಾಗ್ರಾಮ್ನ ಸಹಕಾರವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮೃತ ರೇಣುಕಾಸ್ವಾಮಿ ಅವರು ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಕಳುಹಿಸಿರುವ ಸಂದೇಶಗಳ ಮಾಹಿತಿ ನೀಡುವಂತೆ ಇನ್ಸ್ಟಾಗ್ರಾಮ್ಗೆ ಮನವಿ ಮಾಡಿದ್ದಾರೆ. ದರ್ಶನ್ ಅವರ ಅಭಿಮಾನಿಯಾಗಿರುವ ರೇಣುಕಾಸ್ವಾಮಿ ಅವರು ಪವಿತ್ರ ಗೌಡ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು, ನಂತರ ಅವರನ್ನು ಅಪಹರಿಸಿ, ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಪೊಲೀಸರು, ವ್ಯಾಪಕ ಪ್ರಯತ್ನಗಳ ಹೊರತಾಗಿಯೂ, ರೇಣುಕಾಸ್ವಾಮಿ ಅವರ ಮೊಬೈಲ್ ಫೋನ್ ಪತ್ತೆಯಾಗದ್ದರಿಂದ ಇನ್ಸ್ಟಾಗ್ರಾಮ್ಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರ ಬಂಧನ
ಪಾಟ್ನಾ, ಜೂ. ೨೭: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಗುರುವಾರ ಮೊದಲ ಬಾರಿ ಬಿಹಾರದ ಇಬ್ಬರು ವ್ಯಕ್ತಿಗಳಾದ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಕುಮಾರ್ ಎಂಬವರನ್ನು ಬಂಧಿಸಿದೆ. ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣವನ್ನು ಜೂನ್ ೨೫ ರಂದು ಬಿಹಾರ ಪೊಲೀಸ್ ಆರ್ಥಿಕ ಅಪರಾಧಗಳ ಘಟಕದಿಂದ ಸಿಬಿಐ ವಹಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ. ಈ ಇಬ್ಬರು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಮೇ ೪ ರಂದು ರಾಜ್ಯ ರಾಜಧಾನಿ ಪಾಟ್ನಾದಲ್ಲಿ ನೀಟ್-ಯುಜಿ ಪರೀಕ್ಷಾರ್ಥಿಗಳಿಗೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಬಿಹಾರ ಪೊಲೀಸರ ಇಒಯು ಈ ಹಿಂದೆ ಬಿಹಾರದಲ್ಲಿ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಜಾರ್ಖಂಡ್ನಲ್ಲಿ ಆರು ಮಂದಿ ಸೇರಿದಂತೆ ೧೩ ಜನರನ್ನು ಬಂಧಿಸಿತ್ತು. ಅಶುತೋಷ್ ಕುಮಾರ್ ಅವರ ಕೋರಿಕೆಯ ಮೇರೆಗೆ ವಸತಿ ವ್ಯವಸ್ಥೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಮನೀಶ್ ಪ್ರಕಾಶ್ ಅವರನ್ನು ರಾಜ್ಯ ರಾಜಧಾನಿಯಲ್ಲಿ ಬಂಧಿಸಿದೆ. ಅಶುತೋಷ್ನನ್ನು ಸಹ ಸಿಬಿಐ ಪಾಟ್ನಾದಲ್ಲಿಯೇ ಬಂಧಿಸಿದೆ.
ಮಕ್ಕಳ ಮಾರಾಟ ಜಾಲ ಪತ್ತೆ: ೭ ಮಂದಿ ಬಂಧನ
ತುಮಕೂರು, ಜೂ. ೨೭: ಅವಿವಾಹಿತರು ಹಾಗೂ ಅಕ್ರಮ ಸಂಬAಧದಿAದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆ ಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು, ೭ ಮಂದಿ ಆರೋಪಿಗಳನ್ನು ಬಂಧಿಸಿ ೫ ಮಕ್ಕಳನ್ನು ರಕ್ಷಿಸಿದ್ದಾರೆ. ಬಂಧಿತರನ್ನು ಮಹೇಶ್ ಯು.ಡಿ., ಮೆಹಬೂಬ್ ಷರೀಫ್, ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಮತ್ತು ಸೌಜನ್ಯ ಎಂದು ಗುರುತಿಸಲಾಗಿದೆ. ಜೂನ್ ೯ರ ರಾತ್ರಿ ಅಂತಾಪುರ ಸಮೀಪದ ದೇವಸ್ಥಾನದ ಬಳಿ ಮಲಗಿದ್ದಾಗ ಮಹಾದೇವಿ ಎಂಬುವವರ ೧೧ ತಿಂಗಳ ಮಗುವನ್ನು ಅಪಹರಿಸಲಾಗಿತ್ತು. ಈ ಸಂಬAಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ವಿಶೇಷ ತಂಡವನ್ನು ರಚಿಸಿದ್ದರು.