ಕೂಡಿಗೆ, ಜೂ. ೨೬: ಕುಶಾಲನಗರ ತಾಲೂಕಿನ ಅನೇಕ ಗ್ರಾಮಗಳ ರೈತರು ತಮ್ಮ ಜಮೀನುಗಳ ಆರ್.ಟಿ.ಸಿ.ಗಳ ಪ್ರಕಾರದಲ್ಲಿ ಕೃಷಿ ಗುರುತಿನ ಸಂಖ್ಯೆ ನೋಂದಣಿ ಮಾಡಿಸಲು ಕೃಷಿ ಇಲಾಖೆಗೆ ತೆರಳಿದ ಸಂದರ್ಭದಲ್ಲಿ ಅನೇಕ ರೈತರ ಜಮೀನುಗಳ ಆರ್.ಟಿ.ಸಿ. ಸಂಖ್ಯೆಯ ಪ್ರಕಾರ ಸರಕಾರಿ ಜಮೀನು ಎಂಬುದಾಗಿ ಕೃಷಿ ಇಲಾಖೆಯ ತಂತ್ರಾAಶದಲ್ಲಿ ಕಂಡು ಬರುತ್ತಿದ್ದು, ರೈತರು ಅತಂತ್ರರಾಗಿ ಕಂದಾಯ ಇಲಾಖೆಗೆ ಮತ್ತು ಸಾಲ ನೀಡುವ ಸಹಕಾರ ಸಂಘಗಳಿಗೆ ಅಲೆದಾಡುವಂತಹ ಪ್ರಸಂಗ ಎದುರಾಗಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ರಾಮೇಶ್ವರ, ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ನೀಡುವ ಬಡ್ಡಿ ರಹಿತ ಕೃಷಿ ಸಾಲವನ್ನು ಅವರವರÀ ಜಮೀನಿನ ಆಧಾರದ ಮೇಲೆ ನೀಡಲಾಗುತ್ತಿದೆ. ಸರಕಾರದ ನಿಯಮಾನುಸಾರ ಕಳೆದ ೨೦ ವರ್ಷಗಳಿಂದಲೂ ರೈತರ ಜಮೀನಿನ ಆರ್.ಟಿ.ಸಿ. ಆಧಾರದ ಮೇಲೆ ಕೃಷಿ ಸಾಲವನ್ನು ಸಹಕಾರ ಸಂಘಗಳು ನೀಡುತ್ತಾ ಬಂದಿವೆ. ಆದರೆ ಈ ಸಾಲಿನಲ್ಲಿ ಸರಕಾರದ ಹೊಸ ನಿಯಮದ ಪ್ರಕಾರ ರೈತರು ಕೃಷಿ ಇಲಾಖೆಯಲ್ಲಿ ನಮೂನೆ ಅರ್ಜಿ ಸಂಖೆ-೩ರ ಜಮೀನಿನ ದಾಖಲೆ ಮತ್ತು ಕೃಷಿ ಗುರುತಿನ ಸಂಖ್ಯೆಯನ್ನು ನೋಂದಣಿ ಮಾಡಿ ಅದರ ಆಧಾರದ ಮೇಲೆ ಕೆ.ಸಿ.ಸಿ. ಸಾಲವನ್ನು ಬಡ್ಡಿ ರಹಿತವಾಗಿ ಪಡೆಯಬೇಕಿದೆ. ಕಳೆದ ಸಾಲಿನಲ್ಲಿ ಕೃಷಿ ಸಾಲವನ್ನು ಪಡೆದ ರೈತರು ಸಾಲ ಮರುಪಾವತಿ ಮಾಡುವ ಸಂದರ್ಭದಲ್ಲಿ ದಾಖಲೆಗಳು ‘ಸರಕಾರ’ ಎಂದು ನಮೂದಾಗಿರುವುದರಿಂದ ಸಾಲ ಮರುಪಾವತಿಸಲಾಗದೆ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಅತಂತ್ರರಾಗಿದ್ದಾರೆ. ೨೦೨೨-೨೩ನೇ ಸಾಲಿನಲ್ಲಿ ಜಮೀನಿನ ಆಧಾರದ ಮೇಲೆ ಕೆ.ಸಿ.ಸಿ. ಕೃಷಿ ಸಾಲವನ್ನು ಪಡೆದ ರೈತರು ಬಡ್ಡಿ ರಹಿತವಾಗಿ ಸಾಲವನ್ನು ಮರುಪಾವತಿ ಮಾಡಲು ಈ ತಿಂಗಳು ಕೊನೆಯದ್ದಾಗಿದ್ದು, ಮರುಪಾವತಿ ಮಾಡದಿದ್ದರೆ ಸಂಘದಿAದ ಬಡ್ಡಿಯನ್ನು ಕಟ್ಟುವಂತ ಪ್ರಸಂಗ ಎದುರಾಗುತ್ತಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಕೂಡ್ಲೂರಿನ ನೂರಾರು ರೈತರ ಜಮೀನುಗಳ ಆರ್.ಟಿ.ಸಿ.ಯಲ್ಲಿ ರೈತರ ಹೆಸರು ಇದೆ, ಆದರೆ ಕೃಷಿ ಗುರುತಿನ ಸಂಖ್ಯೆ ನೋಂದಣಿ ಸಂದರ್ಭದಲ್ಲಿ ‘ಸರಕಾರ’ ಎಂಬುದಾಗಿ ಬರುತ್ತಿರುವುದರಿಂದಾಗಿ ಸಹಕಾರ ಸಂಘದಿAದ ಪಡೆದ ಕೃಷಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಕಂದಾಯ ಇಲಾಖೆಯವರು ಈ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಿದ್ದಾರೆ. ಆಗಿರುವ ಸಮಸ್ಯೆಯನ್ನು ಕಂದಾಯ ಇಲಾಖೆ ಸರಿಪಡಿಸಲು ಸಂಬAಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಚನೆ ನೀಡುವಂತೆ ಈ ವ್ಯಾಪ್ತಿಯ ರೈತರಾದ ಪಿ.ಡಿ. ಸುಂದರ, ಕೆ. ಶಾಂತಾ, ಟಿ.ಎಂ. ವೀರಭದ್ರ, ಪ್ರಸನ್ನ, ಸಂತೋಷ್, ಗಿಡ್ಡಪ್ಪ, ಚಂದ್ರಶೇಖರ್, ಸೇರಿದಂತೆ ನೂರಾರು ರೈತರು ಆಗ್ರಹಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ