ಗೋಣಿಕೊಪ್ಪಲು ವರದಿ, ಜೂ. ೨೬: ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪರಿಸರ ದಿನ ಅಂಗವಾಗಿ ಗಿಡ ನೆಡುವ ಅಭಿಯಾನವನ್ನು ಹಮ್ಮಿ ಕೊಳ್ಳಲಾಯಿತು.
ವಿವಿಧೆಡೆಗಳಲ್ಲಿ ಹಲವು ಗಿಡಗಳನ್ನು ಉತ್ಸುಕತೆಯಿಂದ ನೆಡುವ ಮೂಲಕ ಮಹಿಳೆಯರು ಪರಿಸರ ಜಾಗೃತಿ ತೋರಿದರು.
ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಆವರಣ ಮತ್ತು ಐಟಿಐ ಕಾಲೇಜು ಆವರಣದಲ್ಲಿ ಪೊಮ್ಮಕ್ಕಡ ಕೂಟದ ಸದಸ್ಯರು ವಿವಿಧ ತಳಿಯ ಗಿಡಗಳನ್ನು ನೆಟ್ಟರು. ಸಂಪಿಗೆ, ನೇರಳೆ, ಜಂಬುನೇರಳೆ, ಸೀಬೆ, ಔಷಧೀಯ ಗುಣಗಳುಳ್ಳ ಗಿಡಗಳನ್ನು ನೆಡಲಾಯಿತು.
ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಮಾತನಾಡಿ, ಸತತ ೪ ವರ್ಷಗಳಿಂದ ಗಿಡ ನೆಡುವ ಕಾರ್ಯ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ವೈಯಕ್ತಿಕ ಆಚರಣೆ ಸಂದರ್ಭ ಗಿಡ ನೆಡುವ ಕಾರ್ಯ ಪರಿಸರಕ್ಕೆ ಲಾಭ ತರಲಿದೆ.
ಬಹುತೇಕ ನಗರೀಕರಣದಿಂದ ಗಿಡ, ಮರಗಳು ನಾಶವಾಗುತ್ತಿದೆ. ದಕ್ಷಿಣ ಕೊಡಗಿನ ಪಟ್ಟಣ ಭಾಗಕ್ಕೆ ಸೇರುವಾಗ ಹೆಚ್ಚು ತಾಪಮಾನ ಎದುರಿಸುತ್ತಿದ್ದೇವೆ. ಇದಕ್ಕೆ ಮರ ನಾಶವೇ ಕಾರಣವಾಗಿದೆ. ಆಯುರ್ವೇದಿಕ್, ಹೊಂಗೆ ಮರಗಳನ್ನು ನೆಡಲು ಸ್ಥಳೀಯ ಆಡಳಿತ ಯೋಜನೆ ರೂಪಿಸಬೇಕಿದೆ. ಜಪಾನ್ನಲ್ಲಿ ಅಕಿರ ಮುಯಾವ್ ವಾಕಿ ಎಂಬವರು ಗಿಡಗಳನ್ನು ಗುಂಪು ಗುಂಪಾಗಿ ನೆಡಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಎಂಎಲ್ಸಿ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಗಿಡ ನೆಟ್ಟು ಪೋಷಿಸುವ ಕಾರ್ಯ ಕೂಡ ಮುಖ್ಯ. ಮುಂದಿನ ಪೀಳಿಗೆಗೆ ಪರಿಸರ ಅರ್ಪಣೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ ಎಂದರು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದ ಗಿಡ ಪೋಷಣೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಿಡಿಓ ಪುಟ್ಟರಾಜು ಮಾತನಾಡಿ, ಸಂಘಟನೆಗಳ ಸಹಕಾರದಲ್ಲಿ ಗಿಡ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಮಹಾತ್ಮಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೂಟದ ಕಾರ್ಯದರ್ಶಿ ಮುಕ್ಕಾಟೀರ ಬೀನಾ ಪ್ರಸನ್ನ, ಖಜಾಂಚಿ ಪರದಂಡ ಸುಮಿ, ಕಮಿಟಿ ಸದಸ್ಯರಾದ ಆಪಟ್ಟೀರ ಸೌಮ್ಯ ಮೊಣ್ಣಪ್ಪ, ಬಲ್ಯಮೀದೇರಿರ ಆಶಾ ಶಂಕರ್, ಸಣ್ಣುವಂಡ ಡಯನಾ ವಿನಯ್, ಮಲ್ಲೇಂಗಡ ಮಮತಾ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್ ಇದ್ದರು.