ಮಡಿಕೇರಿ, ಜೂ. ೨೬: ಕೊಡಗು ಜಿಲ್ಲೆಯಾದ್ಯಂತ ಜೂ.೨೫ರ ಮಂಗಳವಾರದಿAದ ಮಳೆಯ ರಭಸ ಹೆಚ್ಚಾಗಿದೆ. ಬಹುತೇಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಆರ್ದ್ರಾ ಅಬ್ಬರಕ್ಕೆ ಕೆಲವು ಕಡೆಗಳಲ್ಲಿ ಹಾನಿಗಳೂ ಉಂಟಾಗಿರುವ ಕುರಿತು ವರದಿ ಯಾಗಿದೆ. ನಿನ್ನೆಯ ತನಕ ಮಳೆಗಾಲದ ಸನ್ನಿವೇಶವೇ ಇತ್ತಾದರೂ ಮಳೆಯ ತೀವ್ರತೆ ಹೆಚ್ಚಿರಲಿಲ್ಲ. ಆದರೆ ನಿನ್ನೆಯಿಂದ ಮುಂಗಾರಿನ ರಭಸ ಒಂದಷ್ಟು ಹೆಚ್ಚಾಗುತ್ತಿರುವಂತೆ ಕಂಡು ಬರುತ್ತಿದೆ. ಈ ಹಿನ್ನೆಲೆ ತಾ.೨೮ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ಕಾವೇರಿ ಸೇರಿದಂತೆ ವಿವಿಧ ನದಿ- ತೋಡು-ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಭಾಗಮಂಡಲ ತ್ರಿವೇಣಿ

(ಮೊದಲ ಪುಟದಿಂದ) ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಚೆಟ್ಟಳ್ಳಿ-ನೀರುಕೊಲ್ಲಿ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದು, ಶಾಲಾ ಮಕ್ಕಳು-ಸಾರ್ವಜನಿಕರು ಪರದಾಡ ಬೇಕಾಯಿತು, ಇಂದು ಮರ ತೆರವುಗೊಳಿಸಲಾಯಿತು. ದಕ್ಷಿಣ ಕೊಡಗಿನಲ್ಲೂ ಕಳೆದ ರಾತ್ರಿ ಹಾಗೂ ಇಂದು ಭಾರೀ ಮಳೆ ಸುರಿದಿದೆ. ಸೋಮವಾರಪೇಟೆ, ನಾಪೋಕ್ಲು ವಿಭಾಗ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಳೆಯ ತೀವ್ರತೆಯಿಂದ ಜನರು ಆತಂಕ ಎದುರಿಸುವಂತಾಗಿತ್ತು. ಭಾಗಮಂಡ ಲಕ್ಕೆ ಅತೀ ಹೆಚ್ಚು ಅಂದರೆ ೫.೮೨ ಇಂಚಿನಷ್ಟು ಮಳೆಯಾಗಿದೆ. ದಕ್ಷಿಣ ಕೊಡಗಿನ ಬಿರುನಾಣಿ ವ್ಯಾಪ್ತಿಯಲ್ಲಿ ಒಂದೇ ದಿನ ಸುಮಾರು ೪.೫೦ ಇಂಚಿನಷ್ಟು ಧಾರಾಕಾರ ಮಳೆಯಾಗಿರುವ ಕುರಿತು ವರದಿಯಾಗಿದೆ.

ಜಿಲ್ಲೆಯಲ್ಲಿ ಸರಾಸರಿ ೨.೫೦ ಇಂಚು

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೫೦ ಇಂಚು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೬೦ ಇಂಚು, ವೀರಾಜಪೇಟೆ ೩.೪೦, ಪೊನ್ನಂಪೇಟೆ ೨.೮೯, ಸೋಮವಾರಪೇಟೆ ೧.೮೦, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧ ಇಂಚಿನಷ್ಟು ಮಳೆಯಾಗಿದೆ.

ಭಾಗಮಂಡಲಕ್ಕೆ ಅಧಿಕ

ಜಿಲ್ಲೆಯ ವಿವಿಧ ಹೋಬಳಿಗಳಲ್ಲಿಯೂ ಅಧಿಕ ಮಳೆಯಾಗಿದೆ. ಭಾಗಮಂಡಲ ಹೋಬಳಿಗೆ ೫.೮೨ ಇಂಚಿನಷ್ಟು ಭಾರೀ ಮಳೆ ದಾಖಲಾಗಿದೆ. ಮಡಿಕೇರಿ ಕಸಬಾದಲ್ಲಿ ೨.೨೪, ನಾಪೋಕ್ಲು ೩.೪೦, ಸಂಪಾಜೆ ೨.೯೪, ವೀರಾಜಪೇಟೆ ಕಸಬಾ ೩.೫೭, ಅಮ್ಮತ್ತಿ ೩.೨೪, ಹುದಿಕೇರಿ ೨.೬೪, ಶ್ರೀಮಂಗಲ ೨.೬೫, ಪೊನ್ನಂಪೇಟೆ ೩.೩೨ ಹಾಗೂ ಬಾಳೆಲೆ ಹೋಬಳಿಗೆ ೩ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಬಾಕ್ಕೆ ೧.೭೩, ಶನಿವಾರಸಂತೆ ೧.೧೨, ಶಾಂತಳ್ಳಿ ೩.೪೦, ಕೊಡ್ಲಿಪೇಟೆ ೦.೯೨, ಕುಶಾಲನಗರ ಹೋಬಳಿಗೆ ೦.೪೦ ಇಂಚು ಮಳೆ ಸುರಿದಿದೆ.

ಭಾಗಮಂಡಲ: ಎರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿವೆ. ಕಳೆದ ವರ್ಷ ಜನವರಿಯಿಂದ ಜೂನ್ ವರೆಗೆ ೬೦೩.೪ ಮಿಲಿಮೀಟರ್ ಮಳೆಯಾಗಿದ್ದರೆ, ಈ ವರ್ಷ ಜನವರಿಯಿಂದ ಜೂನ್ ವರೆಗೆ ೧೦೯೭ ಮಿಲಿಮೀಟರ್ ಮಳೆ ಸುರಿದಿದೆ.

೨ ತಾಲೂಕಿನ ಶಾಲೆಗಳಿಗೆ ರಜೆ

ಮಡಿಕೇರಿ, ಜೂ. ೨೬: ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಾ.೨೭ ರಂದು (ಇಂದು) ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪೊನ್ನಂಪೇಟೆ ಹಾಗೂ ವೀರಾಜಪೇಟೆ

೨ ತಾಲೂಕಿನ ಶಾಲೆಗಳಿಗೆ ರಜೆ

(ಮೊದಲ ಪುಟದಿಂದ) ತಾಲೂಕು ವ್ಯಾಪ್ತಿಯಲ್ಲಿ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಎರಡು ತಾಲೂಕುಗಳ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನಿರ್ದೇಶನದ ಮೇಲೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.