vವೀರಾಜಪೇಟೆ, ಜೂ. ೨೬: ಪಟ್ಟಣದ ನೆಹರು ನಗರ ಬೆಟ್ಟ ಪ್ರದೇಶದ ನಿವಾಸಿಗಳಿಗೆ ನೀರಿನ ಬವಣೆಯನ್ನು ತಪ್ಪಿಸಲು ಪುರಸಭೆ ಹದಿನೈದನೆ ಹಣಕಾಸು ಆಯೋಗದ ಮೂಲ ಯೋಜನೆ ಅಡಿಯಲ್ಲಿ ನೆಹರು ನಗರ ವ್ಯಾಪ್ತಿಯಲ್ಲಿ ೫೦ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕನ್ನು ನಿರ್ಮಿಸಿದ್ದು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಲೋಕಾರ್ಪಣೆ ಗೊಳಿಸಿದರು.

ನೆಹರು ನಗರ ವಾರ್ಡ್ ಸದಸ್ಯೆ ಎಂ.ಕೆ. ದೇಚಮ್ಮ ಮಾಹಿತಿ ನೀಡಿ, ಬೇಸಿಗೆ ಕಾಲದಲ್ಲಿ ನೆಹರು ನಗರ ಹಾಗೂ ಮೊಗರಗಲ್ಲಿಯಲ್ಲಿ ನೀರಿನ ಸಮಸ್ಯೆ ಉಲ್ಭಣಗೊಳ್ಳುತಿತ್ತು. ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ನೀರಿನ ಟ್ಯಾಂಕ್‌ನಿAದ ಎರಡು ದಿನಕ್ಕೊಮ್ಮ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಈ ಖಾಸಿಂ ಉಲಾ ಉಲಾಂ ಮದರಸ ಸಂಸ್ಥೆಯವರು ಟ್ಯಾಂಕ್ ನಿರ್ಮಾಣ ಮಾಡಲು ಜಾಗವನ್ನು ಉದಾರವಾಗಿ ನೀಡಿದ ಹಿನ್ನೆಲೆಯಲ್ಲಿ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಎಸ್.ಪಿ. ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ತಹಶೀಲ್ದಾರ್ ರಾಮಚಂದ್ರ, ಖಾಸಿಂ ಉಲಾ ಉಲಾಂ ಮದರಸ ಸಂಸ್ಥೆ ಅಧ್ಯಕ್ಷ ಅಸ್ಗರ್ ಹುಸೇನ್, ಮುಖ್ಯಾಧಿಕಾರಿ ಚಂದ್ರಕುಮಾರ್, ಜಿಲ್ಲಾ ನಗರಾಭಿವೃದ್ಧಿ ಅಭಿಯಂತರ ಹೇಮಕುಮಾರ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.