ಮುಳ್ಳೂರು, ಜೂ. ೨೬: ಸಮೀಪದ ಗೌಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು ಮುಂತಾದ ಲೀಖನಿ ಪರಿಕರಗಳನ್ನು ವಿತರಿಸಲಾಯಿತು. ನೋಟ್ ಬುಕ್, ಲೇಖನಿ ಸಾಮಗ್ರಿಗಳ ದಾನಿಯಾದ ಬಸವನಕೊಪ್ಪಲು ಮಹೇಂದ್ರ ಅವರ ಅನುಪಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಗೌಡಳ್ಳಿ ಕ್ಲಸ್ಟರ್ ಸಿಆರ್ಪಿ ದೇವರಾಜೇಗೌಡ ಮಾತನಾಡಿ-ಸರಕಾರ ಮತ್ತು ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳ ಪ್ರಗತಿಗಾಗಿ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಪ್ರೋತ್ಸಾಹಿಸುವ ಸಲುವಾಗಿ ಸರಕಾರಿ ಶಾಲೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲು ಪೋಷಕರು, ಸಾರ್ವಜನಿಕರು ಮತ್ತು ದಾನಿಗಳು ಸಹಕಾರ ನೀಡಿದರೆ ಮಾತ್ರ ಶಾಲೆಗಳು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಗೌಡಳ್ಳಿ ನವದುರ್ಗ ಪರಮೇಶ್ವರಿ ಸಮುದಾಯ ಭವನದ ಅಧ್ಯಕ್ಷ ಮಹೇಶ್ ಮಾತನಾಡಿ, ನಾವು ಓದಿದ ಶಾಲೆಗಳನ್ನು ಮರೆಯಬಾರದು , ಸರಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಗಳಿಗೆ ಏನಾದರೂ ಕೊಡುಗೆಯನ್ನು ನೀಡುವ ಮೂಲಕ ಸರಕಾರಿ ಶಾಲೆಗಳ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಫ್ರಾನ್ಸಿಸ್ ಡಿಸೋಜ, ಪತ್ರಕರ್ತ ಶರಣ್ ಮಾತನಾಡಿದರು. ಗೌಡಳ್ಳಿ ನವದುರ್ಗ ಪರಮೇಶ್ವರಿ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಎಚ್.ಆರ್. ಮುತ್ತಣ್ಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಲಾ, ಶಿಕ್ಷಕಿಯರಾದ ಅರ್ಚನ, ಸಂಗೀತ, ಶಿಕ್ಷಕ ನಾಗರಾಜ್ ಹಾಜರಿದ್ದರು.