ಮಡಿಕೇರಿ, ಜೂ. ೨೬: ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಘಟಕದ ೩ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಡಿಕೇರಿಯ ಹ್ಯೂಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮತ್ತು ಕೊಡಗು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ತಾ.೨೭ರಂದು (ಇಂದು) ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾಹಿತಿ ನೀಡಿದರು.
ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭ ಜಿಲ್ಲೆಯಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿದ್ದರಿಂದ ಬ್ಲಡ್ ಫೌಂಡೇಶನ್ ಶ್ರಮವಹಿಸಿ ರಕ್ತ ಸಂಗ್ರಹಕ್ಕೆ ಮುಂದಾಗಿದ್ದರು. ನಂತರ ರಕ್ತದಾನವನ್ನು ದೇವರ ಸೇವೆ ಎಂಬAತೆ ಬ್ಲಡ್ ಫೌಂಡೇಶನ್ ಮಾಡುತ್ತಿದೆ ಎಂದ ಅವರು ರಕ್ತದಾನ ಶಿಬಿರವನ್ನು, ಸುಮಾರು ೫೦ ಬಾರಿ ರಕ್ತ ನೀಡಿದ ದಾನಿ ರಾಮಪ್ಪ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ರ ತನಕ ಶಿಬಿರ ನಡೆಯಲಿದೆ ಎಂದರು.
ಈ ಬಾರಿಯ ಶಿಬಿರದ ಮೂಲಕ ಸುಮಾರು ೫೦ ಯೂನಿಟ್ ರಕ್ತ ಸಂಗ್ರಹದ ಗುರಿ ಹೊಂದಿರುವುದಾಗಿ ಬ್ಲಡ್ ಫೌಂಡೇಶನ್ನ ಸಮೀರ್ ಹೇಳಿದರು.
ಬ್ಲಡ್ ಫೌಂಡೇಶನ್ನ ಪ್ರತಿನಿಧಿ ಚಂದನ್ ನಂದರಬೆಟ್ಟು ಮಾತನಾಡಿ, ಕೊಡಗಿನ ಐದು ತಾಲೂಕುಗಳಿಗೂ ಮಡಿಕೇರಿಯಲ್ಲಿ ಒಂದೇ ಒಂದು ರಕ್ತ ನಿಧಿ ಕೇಂದ್ರವಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರಕ್ತದ ಅಗತ್ಯವಿರುವುದರಿಂದ ದಾನಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ರಕ್ತ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬ್ಲಡ್ ಫೌಂಡೇಶನ್ ಪ್ರಮುಖರಾದ ವಿನು, ಮಹಮ್ಮದ್ ಶರೀಫ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಹಾಜರಿದ್ದರು.