ಕಣಿವೆ, ಜೂ. ೨೫: ಗ್ರಾಮ ಪಂಚಾಯಿತಿಯಲ್ಲಿ ಪ್ರಬಾರ ಪಿಡಿಒ ಆಗಿ ನಿಯೋಜನೆಗೊಂಡು ಇದೀಗ ಬೇರೆಡೆ ಕರ್ತವ್ಯ ನಿರ್ವಹಿಸುತ್ತಿರುವ ಗೂಳಪ್ಪರನ್ನು ಪಂಚಾಯಿತಿಗೆ ಕರೆಸುವವರೆಗೂ ಯಾವುದೇ ಸಾಮಾನ್ಯ ಸಭೆಗಳನ್ನು ನಡೆಸಬಾರದು ಎಂಬ ತೀರ್ಮಾನಕ್ಕೆ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ನಿರ್ಣಯ ಕೈಗೊಂಡು ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದರು.

ಹೆಬ್ಬಾಲೆಯ ಗ್ರೇಡ್ ೧ ಪಂಚಾಯಿತಿ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ಸಭೆಯಲ್ಲಿ ಭಾಗಿಯಾದ ಪಂಚಾಯಿತಿಯ ಬಹುತೇಕ ಸದಸ್ಯರು ಸಭೆಯ ಅಜೆಂಡಾವನ್ನು ನೋಡಿ ಮೊದಲು ಹಳೆಯ ಪಿಡಿಒ ಗೂಳಪ್ಪ ಅವರನ್ನು ಸಭೆಗೆ ಕರೆಸಬೇಕು. ಅವರ ಬೇಜವಾಬ್ದಾರಿ ವರ್ತನೆಯಿಂದ ಪಂಚಾಯಿತಿಯ ಗೌರವಕ್ಕೆ ಧಕ್ಕೆಯಾಗಿದೆ. ಪಂಚಾಯಿತಿಯಲ್ಲಿ ಹದಿನೈದನೇ ಹಣಕಾಸಿನ ಹಣ ಇದ್ದರೂ ಕೂಡ ಚೆಸ್ಕಾಂಗೆ ಬಾಕಿಯಿದ್ದ ಹಣವನ್ನು ಪಾವತಿಸದೇ ಚೆಸ್ಕಾಂ ನವರು ಸಂಪರ್ಕ ಕಡಿತಗೊಳಿಸಿ ಪಂಚಾಯಿತಿ ಮಾನ ಹರಾಜಾಯಿತು.

ಪಂಚಾಯಿತಿಯಲ್ಲಿ ಇದ್ದಾಗ ಸದಸ್ಯರ ಪೋನ್ ಕರೆಗಳನ್ನು ಸ್ವೀಕರಿಸದೇ ಅಸಡ್ಡೆ ತೋರಿದ ಈ ವ್ಯಕ್ತಿ ಪಂಚಾಯಿತಿಯ ಅಧ್ಯಕ್ಷೆಯ ಮಾತಿಗೂ ಮನ್ನಣೆ ಕೊಟ್ಟಿರಲಿಲ್ಲ ಎಂದು ಸ್ವತಃ ಅಧ್ಯಕ್ಷೆ ಅರುಣಕುಮಾರಿ ಮಾಧ್ಯಮದವರೊಂದಿಗೆ ದೂರಿದರು. ಪಂಚಾಯಿತಿಗೆ ಖಾಯಂ ಪಿಡಿಒ ನಿಯೋಜಿಸದೇ ಜಿಪಂ ಮತ್ತು ತಾಪಂ ಅಧಿಕಾರಿಗಳು ತಾತ್ಸಾರ ತೋರಿದ್ದಾರೆ.

ಪಂಚಾಯಿತಿ ಪಿಡಿಒ ದುರಾಡಳಿತವನ್ನು ತಡೆಯುವಲ್ಲಿ ಪಂಚಾಯಿತಿ ಅಧ್ಯಕ್ಷೆ ವಿಫಲರಾಗಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಜನರು ಪಂಚಾಯಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಕಾರಣರು ಎಂದು ಪಂಚಾಯಿತಿ ಸದಸ್ಯರಾದ ಮಂಜುನಾಥ್, ಮಹದೇವ, ತನುಕುಮಾರ್, ಮಹೇಶ್ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡ್ ವ್ಯಾಪ್ತಿಗಳಲ್ಲಿ ಸದಸ್ಯರು ಮುಕ್ತವಾಗಿ ಕೊನೆಯ ಪಕ್ಷ ಸ್ವಚ್ಛತೆಯನ್ನು ಕೂಡ ಮಾಡಿಸುವಂತಿಲ್ಲ. ಎಲ್ಲಕ್ಕೂ ಅಧ್ಯಕ್ಷರ ಅಣತಿ ಬೇಕು ಎಂದು ಸ್ವಚ್ಛತಾ ನೌಕರ ಹೇಳುತ್ತಾರೆ. ಹಾಗಾಗಿ ಪಂಚಾಯಿತಿ ಆಡಳಿತ ಎತ್ತ ಸಾಗಿದೆ ಎಂದು ಸದಸ್ಯ ಮಂಜುನಾಥ್ ಖಾರವಾಗಿ ಪ್ರಶ್ನಿಸಿ ಸಭೆಯಿಂದ ಹೊರ ನಡೆದರು. ಇದೀಗ ಪಂಚಾಯಿತಿಗೆ ನಿಯೋಜನೆಯಾಗಿರುವ ಬದಲೀ ಪಿಡಿಒ ಅವರಿಗೆ ದಾಖಲೆಗಳನ್ನು ಹಿಂದಿನ ಪಿಡಿಒ ಹಸ್ತಾಂತರಿಸಿಲ್ಲ. ಗೂಳಪ್ಪ ಅವರ ಬೇಜವಬ್ದಾರಿತನದ ಬಗ್ಗೆ ಜಿಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಲಾಗಿದೆ ಎಂದು ಅಧ್ಯಕ್ಷೆ ಅರುಣ ಕುಮಾರಿ ವಿವರಿಸಿದರು. ಬಹಿಷ್ಕಾರಗೊಂಡ ಸಭೆಗೆ ಉಪಾಧ್ಯಕ್ಷೆ ಲತಾ, ಸದಸ್ಯರಾದ ಯಶಸ್ವಿನಿ, ಪವಿತ್ರ, ನಾರಾಯಣ, ಯಶಸ್ವಿನಿ, ರತ್ನಮ್ಮ, ಪುಟ್ಟಲಕ್ಷö್ಮಮ್ಮ, ಪಂಚಾಯಿತಿಯ ಪ್ರಬಾರ ಪಿಡಿಒ ಮೇದಪ್ಪ, ಕಾರ್ಯದರ್ಶಿ ಸುರೇಶ್ ಇದ್ದರು.ವರದಿ : ಕೆ.ಎಸ್.ಮೂರ್ತಿ