ಮಡಿಕೇರಿ, ಜೂ. ೨೫: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕಳೆದ ಒಂದೆರಡು ದಿನಗಳಿಂದ ಒಂದಷ್ಟು ಬಿರುಸು ತೋರಿದೆ. ಆರ್ದ್ರಾ ಮಳೆ ನಕ್ಷತ್ರದಲ್ಲಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆಯಾದರೂ, ನೈಜ ಮಳೆಗಾಲದಂತೆ ನಿರಂತರವಾಗಿ ಮಳೆ ಸುರಿಯುತ್ತಿಲ್ಲ. ನಡುನಡುವೆ ಮಳೆ ವಿರಾಮ ನೀಡುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿಗೆ ಜನವರಿಯಿಂದ ಈತನಕ ೨೮.೬೯ ಇಂಚುಗಳಷ್ಟು ಸರಾಸರಿ ಮಳೆ ದಾಖಲಾಗಿದೆ. ಕಳೆದ ವರ್ಷ ಈ ಪ್ರಮಾಣ ೧೩.೯೨ ಇಂಚಿನಷ್ಟಾಗಿತ್ತು. ಈ ಬಾರಿ ೧೫ ಇಂಚು ಹೆಚ್ಚಾಗಿದೆ.

ಜಿಲ್ಲೆಯಲ್ಲೂ ಈ ಬಾರಿ ಸರಾಸರಿ ೨೦.೫೦ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಪ್ರಮಾಣ ೮.೨೦ ಇಂಚಾಗಿತ್ತು.

ವೀರಾಜಪೇಟೆ ತಾಲೂಕಿಗೆ ಜನವರಿಯಿಂದ ಈತನಕ ೧೮.೦೪, ಪೊನ್ನಂಪೇಟೆ ತಾಲೂಕಿಗೆ ೧೯.೫೫, ಸೋಮವಾರಪೇಟೆ ೧೬.೮೮ ಹಾಗೂ ಕುಶಾಲನಗರ ತಾಲೂಕಿಗೆ ೧೯.೪೧ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ೫.೪೬, ಪೊನ್ನಂಪೇಟೆ ೬.೦೭, ಸೋಮವಾರಪೇಟೆಗೆ ೫.೯೨ ಹಾಗೂ ಕುಶಾಲನಗರ ತಾಲೂಕಿಗೆ ೯.೬೨ ಇಂಚು ಮಳೆಯಾಗಿತ್ತು.