ಮಡಿಕೇರಿ, ಜೂ. ೨೫: ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಜಬ್ಬೂಮಿ ಸಂಘಟನೆಯ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ ಅವರು, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನಲ್ಲಿ ಪ್ರವಾಸಿಗರ ದೌರ್ಜನ್ಯ ಮಿತಿ ಮೀರುತ್ತಿದೆ. ಇದಕ್ಕೆ ರಾಜಕೀಯ ಮತ್ತು ಕೋಮು ಬಣ್ಣ ಬಳಿಯಲಾಗುತ್ತಿದೆ. ವಿನಾಕಾರಣ ಮಹಿಳಾ ದೌರ್ಜನ್ಯದ ಆರೋಪ ಹೊರಿಸಿ ಸ್ಥಳೀಯ ಮೂಲ ನಿವಾಸಿಗಳ ಆತ್ಮಸ್ಥೆöÊರ್ಯ ಕುಗ್ಗಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಉತ್ತರ ಕೊಡಗಿನ ಮಾದಾಪುರ ಸಮೀಪದ ಕೋಟೆ ಬೆಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಕಲಹ ನಡೆದಿದೆ. ಇದಕ್ಕೆ ಮೊದಲಿಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸಿದ್ದು, ನಂತರ ಸ್ಥಳೀಯರಿಂದ ಸರಗಳ್ಳತನ ಎಂದು ಬಿಂಬಿಸಿ, ವೀಡಿಯೋ ಮತ್ತು ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

ಸ್ಥಳೀಯರು ವಾಸ್ತವಾಂಶದ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ ನಂತರ, ಪೊಲೀಸ್ ಇಲಾಖೆ ಸರಗಳ್ಳತನದ ಆರೋಪವನ್ನು ನಿರಾಕರಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ನಡೆದ ಕಲಹ ಮತ್ತು ಈ ಸಂದರ್ಭ ತಡೆಯಲು ಹೋದ ಯುವತಿಯ ಸರ ಬಿದ್ದು ಹೋಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿತ್ತು ಎಂದು ವಿವರಿಸಿದರು.