ಗೋಣಿಕೊಪ್ಪಲು, ಜೂ. ೨೫: ಜನಪದೀಯ ಸೊಗಡಿನ ಜೀವನಶೈಲಿ ಹೊಂದಿರುವ ಗಿರಿಜನರ ಆಚಾರ, ವಿಚಾರ, ಪದ್ಧತಿ, ಪರಂಪರೆ ಎಷ್ಟು ವಿಭಿನ್ನವಾಗಿದೆಯೋ ಅದೇ ರೀತಿ ಅವರ ಸಾಂಸ್ಕೃತಿಕ ಶ್ರೀಮಂತಿಕೆಯೂ ವೈಭವಯುತವಾಗಿ ಕೂಡಿದೆ. ಅಧುನಿಕತೆಯ ಭರಾಟೆಯ ನಡುವೆ ಮರೆಯಾಗುತ್ತಿರುವ ಕಾಡುಮಕ್ಕಳ ನೃತ್ಯ, ಹಾಡುಗಳಿಗೆ ಕಾಡುಹಬ್ಬ ವೇದಿಕೆಯಾಗುವ ಮೂಲಕ ಕಲಾ ವೈಭವ ಮೂಡಿಬಂತು.

ನಾಗರಹೊಳೆಯ ನಾಣಚ್ಚಿಗದ್ದೆ ಹಾಡಿಯ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ವತಿಯಿಂದ ಗೋಣಿಕೊಪ್ಪದ ರಾಧಾ ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಕಾಡುಹಬ್ಬ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.

ಕಾಡುಮಕ್ಕಳ ಸ್ವರಚಿತ ಹಾಡುಗಳು, ಜಾನಪದ ಗೀತೆಗಳು, ಕೋಲಾಟ, ವೈವಿಧ್ಯಮಯ ನೃತ್ಯಗಳು ವೇದಿಕೆಯಲ್ಲಿ ಪ್ರಸ್ತುತಗೊಂಡವು. ಜೇನು ಕುರುಬ, ಬೆಟ್ಟಕುರುಬ, ಪಂಜರಿಯರವ ಜನಾಂಗಗಳ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಿದವು. ಮುಖಕ್ಕೆ ಬಣ್ಣ ಹಚ್ಚಿಕೊಂಡು, ಸೊಪ್ಪುಗಳಿಂದ ತಯಾರಿಸಿದ ಉಡುಪು ಹಾಕಿಕೊಂಡು, ಡ್ರಂ ಸೇರಿದಂತೆ ತಗಡಿನ ವಾದನವನ್ನೇ ಮೂಲವಾದ್ಯಗಳನ್ನಾಗಿ ಬಳಸಿಕೊಂಡು ಮಾಡಿದ ನೃತ್ಯ, ಹಾಡುಗಾರಿಕೆ ವಿಶೇಷವಾಗಿತ್ತು.

ಜೆ.ಬಿ. ರಮೇಶ್ ಹುಲ್ಲುಮನೆ ಅವರಿಂದ ಹಾಡು, ದೊಡ್ಡ ರೇಷ್ಮೆಯ ಬೆಟ್ಟಕುರುಬರ ಬಾಬು ತಂಡದಿAದ ಸಂಸ್ಕೃತಿ ಬಿಂಬಿಸುವ ಗಾಯನ, ಪ್ರತಾಪ್ ತಂಡದ ಸಾಂಪ್ರದಾಯಕ ಕೋಲಾಟ, ಕೋತೂರಿನ ಪಂಜರಿಯರವರ ಮಣಿ ತಂಡ, ನಾಣಚ್ಚಿ ಹಾಡಿಯ ಲೇಖ ತಂಡದಿAದ

(ಮೊದಲ ಪುಟದಿಂದ) ಅಜ್ಜಯ್ಯನ ಜಮ್ಮ ಎಂಬ ವಿಶೇಷ ನೃತ್ಯ, ಚಂದನ ಕೆರೆ ಹಾಡಿಯ ಪಣಿ ಯರವರ ರಮೇಶ್ ತಂಡದಿAದ ಪಣಿಯರವರ ಸಂಸ್ಕೃತಿ ಪರಿಚಯಿಸುವ ನೃತ್ಯ, ಉದಯ ತಂಡದಿAದ ಜೇನು ಕುರುಬ ಮಕ್ಕ ನೃತ್ಯ, ಕುಮಾರ ತಂಡದಿAದ ಲೇ.ಲೇ.. ಎಂಬ ಹಾಡು, ನಾಣಚ್ಚಿ ಗದ್ದೆ ಹಾಡಿ ಪ್ರತಾಪ್ ತಂಡದಿAದ ನಂಗ ಹಾಡಿ, ಅಜ್ಜನ ಆಳಿನ ಮಾತು, ಬಿರ್ಸಾಮುಂಡಾ ಹಾಡಿಗೆ ನೃತ್ಯ ಪ್ರದರ್ಶಿಸಿತು.

ಗಣ್ಯರಿಗೆ ಕಾಡುಮಕ್ಕಳ ಸ್ವಾಗತ

ಸಾಂಸ್ಕೃತಿಕ ಶ್ರೀಮಂತಿಕೆಯ ಅನಾವರಣದೊಂದಿಗೆ ಆಗಮಿಸಿದ ಅತಿಥಿಗಳಿಗೆ ತಮ್ಮದೇ ಶೈಲಿಯ ಸ್ವಾಗತವನ್ನು ಆದಿವಾಸಿಗಳು ನೀಡಿದರು.

ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಕುಣಿಯುತ್ತ, ಹಾಡುತ್ತ ವೇದಿಕೆಗೆ ಗಿರಿಜನರು ಕರೆತಂದರು. ನಂತರ ಅರಣ್ಯ ಪ್ರದೇಶದಲ್ಲಿ ಮರಗಳಲ್ಲಿ ಕಟ್ಟಿರುವ ತಾಜ ಜೇನು ತುಪ್ಪವನ್ನು ಸಂಗ್ರಹಿಸಿ, ಅದನ್ನು ವೇದಿಕೆಯಲ್ಲಿರುವ ಗಣ್ಯರು ಸವಿಯುವ ಮೂಲಕ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳಿಸಿ ಕಾಡುಹಬ್ಬಕ್ಕೆ ಚಾಲನೆ ನೀಡಿದರು. ಅಲ್ಲದೆ ಅತಿಥಿಗಳಿಗೆ ಸಾಂಪ್ರದಾಯಿಕವಾಗಿ ಕಟ್ಟಿದ ಜೇನಿನ ಹನಿಯನ್ನು ಕಾಣಿಕೆ ರೂಪದಲ್ಲಿ ನೀಡಿದರು.

ಶಿಕ್ಷಣವಂತರಾಗಲು ಪೊನ್ನಣ್ಣ ಕರೆ

ಬುಡಕಟ್ಟು ಜನಾಂಗದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕರೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುಡಕಟ್ಟು ಜನಾಂಗ ತಮ್ಮ ಜೀವನ ಶೈಲಿಯನ್ನು ಒಂದಷ್ಟು ಬದಲಾವಣೆ ಮಾಡಿಕೊಂಡು ಎಲ್ಲಾ ಜನಾಂಗದೊAದಿಗೆ ಮುಕ್ತವಾಗಿ ಬೆರೆಯುವ ಮೂಲಕ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮ ಪಡಬೇಕು. ಜನಾಂಗದ ಬಾಂಧವರು ಜಾಗೃತಗೊಂಡು ವೈಯಕ್ತಿಕ ಹಾಗೂ ಸಮುದಾಯಿಕ ಬೆಳವಣಿಗೆಗೆ ಮುಂದಾಗಬೇಕು. ವೈಯಕ್ತಿಕ ಬೆಳವಣಿಗೆಯಾಗುವುದರಿಂದ ಸಮಾಜವು ಮುಂದುವರೆಯುತ್ತದೆ ಎಂದು ಪ್ರತಿಪಾದಿಸಿದ ಅವರು, ಜನಾಂಗದ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು. ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಇದರಿಂದ ಪದ್ಧತಿ, ಪರಂಪರೆ ಉಳಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ರಾಜ್ಯ ಸರಕಾರ ಆದಿವಾಸಿ, ಬಡವರ ಪರ ಕಾಳಜಿ ಹೊಂದಿದೆ. ಜನಪರ ಯೋಜನೆ ಜನರಿಗೆ ತಲುಪುತ್ತಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯಲು ಮುಂದೆ ಬರಬೇಕು. ಬುಡಕಟ್ಟು ಜನಾಂಗದ ಏಳಿಗೆಗೆ ಸದಾ ಜೊತೆಗಿರುವೆ ಎಂದು ಭರವಸೆ ನೀಡಿದ ಅವರು, ಪ್ರತಿ ವರ್ಷ ಆದಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಜಿಲ್ಲಾಡಳಿತ ಸದಾ ಕಾಲ ಬುಡಕಟ್ಟು ಜನಾಂಗದ ಹಿತಕಾಯಲು ಬದ್ಧವಾಗಿದೆ. ಗಿರಿಜನರು ಸೌಲಭ್ಯಗಳಿಂದ ವಂಚಿತರಾಗದAತೆ ಜಿಲ್ಲಾಡಳಿತ ಎಚ್ಚರವಹಿಸಿದೆ. ಆಧಾರ್ ಕಾರ್ಡ್ನಿಂದ ವಂಚಿತರಾದ ನಾಲ್ಕು ಸಾವಿರ ಗಿರಿಜನರನ್ನು ಗುರುತಿಸಿ ಅವರಿಗೆ ಸೌಲಭ್ಯ ಒದಗಿಸಲಾಗಿದೆ. ಗಿರಿಜನರು ಈ ನಾಡಿನ ಪರಿಸರ ಉಳಿಸಲು ಮೂಲ ಕಾರಣಕರ್ತರು ಎಂದರು. ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ಜೆ.ಬಿ. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲ ಬಾರಿಗೆ ಕೊಡಗಿನ ಮೂಲ ನಿವಾಸಿಗಳನ್ನು ಸಾಂಸ್ಕೃತಿಕವಾಗಿ ಒಂದೆಡೆಗೆ ಸೇರಿಸುವ ಪ್ರಯತ್ನ ಮಾಡಲಾಗಿದೆ.

ಜನಪ್ರತಿನಿಧಿ, ದಾನಿಗಳ ಸಹಕಾರದಿಂದ ಇಂತಹ ಕಾರ್ಯ ಕ್ರಮ ರೂಪಿಸಲು ಅವಕಾಶವಾಗಿದೆ ಎಂದರು. ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ನವೀನ್ ಕುಮಾರ್, ಗೋಣಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಆರ್. ಸೋಮಯ್ಯ, ತಿತಿಮತಿ ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷೆ ಜೆ.ಆರ್.ಪುಷ್ಪ, ನಿರ್ದೇಶಕ ಸಿದ್ದಪ್ಪ, ಮುಖಂಡರಾದ ಕುಡಿಯರ ಮುತ್ತಪ್ಪ, ನಿಟ್ಟೂರು ಗ್ರಾ.ಪಂ.ಸದಸ್ಯ ಅಪ್ಪಣ್ಣ, ಮುಖಂಡರಾದ ಜೆ.ಆರ್.ಮಣಿ ಪಾಲ್ಗೊಂಡಿದ್ದರು.

ವಿವಿಧ ಭಾಗದಿಂದ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಶಾಸಕ ಪೊನ್ನಣ್ಣ ಅವರು ವಿವಿಧ ಯುವಕರ ತಂಡಗಳಿಗೆ ವಾಲಿಬಾಲ್ ಕಿಟ್‌ಗಳನ್ನು ವಿತರಿಸಿದರು. ಅತಿಥಿಗಳಿಗೆ ತಾಜ ಚನ್ನನಾಯಕ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

- ಹೆಚ್.ಕೆ.ಜಗದೀಶ್