ಕುಶಾಲನಗರ, ಜೂ. ೨೪: ಮದ್ಯ ಸೇವಿಸಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಗುಂಡು ಹಾರಿಸುವ ಮಟ್ಟಿಗೆ ತಲುಪಿ ಪರಿಣಾಮ ಉದ್ಯಮಿ ಗಾಯಗೊಂಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರ ನಡುವೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಘಟನೆ ಅತಿರೇಕಕ್ಕೆ ತಿರುಗಿ ಭಾನುವಾರ ತಡರಾತ್ರಿ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ಘಟನೆ ನಡೆದಿದೆ. ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ, ಉದ್ಯಮಿ ಆಗಿರುವ ಕೆ.ಎಸ್. ಶಶಿಕುಮಾರ್ ಎಂಬವರು ಗುಂಡಿನ ದಾಳಿಗೆ ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹೊಡೆದ ಗುಮ್ಮನಕೊಲ್ಲಿ ನಿವಾಸಿ ಅನುದೀಪ್ ಹಾಗೂ ಜೊತೆಗಿದ್ದ ಕಾಲಭೈರವೇಶ್ವರ ಬಡಾವಣೆ ನಿವಾಸಿ ಲವ ಎಂಬವರನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಏನಿದು ಘಟನೆ?

ಗಾಯಗೊಂಡ ಶಶಿಕುಮಾರ್ ಹಾಗೂ ಗುಂಡು ಹಾರಿಸಿದ ಅನುದೀಪ್ ಇಬ್ಬರು ಸ್ನೇಹಿತರಾಗಿದ್ದು, ಕುಶಾಲನಗರ ಸಮೀಪ ಕೊಪ್ಪ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆಂದು ತೆರಳಿದ ವೇಳೆ ಶಶಿಕುಮಾರ್ ಮತ್ತು ಅನುದೀಪ್ ನಡುವೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಘರ್ಷಣೆ ಸೃಷ್ಟಿಯಾಗಿದೆ. ಬಳಿಕ ಇಬ್ಬರು ಅಲ್ಲಿಂದ ಹೊರಬಂದ ನಂತರ ಕುಶಾಲನಗರ ಮುಖ್ಯರಸ್ತೆಯಲ್ಲಿ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಲವ ಅನುದೀಪ್‌ನನ್ನು ಮನೆಗೆ ಕರೆದುಕೊಂಡು ಬಿಟ್ಟು ಬಂದಿದ್ದಾನೆ.

ಶಶಿಕುಮಾರ್‌ಗೆ ಲವ ದಾರಿ ಮಧ್ಯೆ ಸಿಕ್ಕಿದ್ದು, ‘ಅನುದೀಪ್ ಎಲ್ಲಿ’ ಎಂದು ಪ್ರಶ್ನಿಸಿದ್ದಾರೆ.

(ಮೊದಲ ಪುಟದಿಂದ) ಇದಕ್ಕೆ ಲವ ‘ಮನೆಗೆ ಬಿಟ್ಟು ಬಂದಿರುವುದಾಗಿ’ ಉತ್ತರಿಸಿದ್ದು, ರಾತ್ರಿ ೧೨.೩೦ಕ್ಕೆ ಶಶಿಕುಮಾರ್ ಬೈದಿರುವುದನ್ನು ಕೇಳಲೆಂದು ಮನೆ ಬಳಿ ತೆರಳಿದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅನುದೀಪ್ ತನ್ನ ಮನೆಯಿಂದ ಬಂದೂಕು ತಂದು ಗುಂಡು ಹಾರಿಸಿದ್ದು, ಇದು ಕಾಲಿಗೆ ತಗುಲಿ ಗಾಯವಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಅನುದೀಪ್ ಗುಂಡು ಹಾರಿಸಿದ್ದು, ಲವ ಕೃತ್ಯಕ್ಕೆ ಪ್ರಚೋದನೆ ನೀಡಿರುವುದಾಗಿ ಗಾಯಾಳು ಶಶಿಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಕುಶಾಲನಗರ ಪೊಲೀಸ್ ಪ್ರಕರಣ ದಾಖಲಾಗಿದೆ.

ಗುಂಡೇಟಿನಿAದ ಗಾಯಗೊಂಡ ತಕ್ಷಣ ಶಶಿಕುಮಾರ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕುಶಾಲನಗರ ಠಾಣೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ವೇಳೆ ಆರೋಪಿ ಲವನನ್ನು ಪೊಲೀಸರು ಬಂಧಿಸಿದ್ದು, ಬೆಳಿಗ್ಗೆ ಅನುದೀಪ್‌ನನ್ನು ಕೊಪ್ಪ ಬಳಿ ಹೋಂಸ್ಟೇ ಒಂದರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ಗೀತಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಈ ಬಗ್ಗೆ ಮಾಹಿತಿ ನೀಡಿ ಕೃತ್ಯಕ್ಕೆ ಬಳಸಿದ ಡಿಬಿಬಿಎಲ್ ಬಂದೂಕನ್ನು ವಶಪಡಿಸಿ ಕೊಳ್ಳುವುದರೊಂದಿಗೆ ಜಮ್ಮಾ ವಿನಾಯಿತಿ ಹೊಂದಿರುವ ಬಂದೂಕಿನ ವಿನಾಯಿತಿ ರದ್ದಾತಿಗೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.

-ಚಂದ್ರಮೋಹನ್