ಮಡಿಕೇರಿ, ಜೂ. ೨೪: ಕೊಡಗಿನಲ್ಲಿ ಬಿಜೆಪಿಯವರನ್ನು ಬಗ್ಗುಬಡಿಯಲು ಹಾಲಿ ಶಾಸಕರು ಮುಂದಾದರೆ ನಾವು ಬಿಡುವುದಿಲ್ಲ ಎಂದು ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ತಾನು ಹಾಗೂ ಬೋಪಯ್ಯ ಅವರುಗಳು ಅಧಿಕಾರದಲ್ಲಿದ್ದಾಗ ನಮ್ಮ ಪ್ರತಿಕೃತಿ ದಹನದಂತಹ ಪ್ರತಿಭಟನೆಗಳು ನಡೆದಿದ್ದವು. ಆದರೆ, ನಾವು ಯಾರ ವಿರುದ್ಧವೂ ಪೊಲೀಸ್ ದೂರು ದಾಖಲಿಸಿರಲಿಲ್ಲ. ಆದರೆ, ತಾ. ೨೦ರಂದು ವೀರಾಜಪೇಟೆಯಲ್ಲಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸ್ ದೂರು ದಾಖಲಿಸುವ ಮೂಲಕ ಶಾಸಕರು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರು ಕಾಂಗ್ರೆಸ್ ಪರವಾಗಿ ಹೋದರೆ ಪೊಲೀಸರನ್ನು ನಿದ್ರೆ ಮಾಡಲು ನಾವು ಬಿಡುವುದಿಲ್ಲ ಎಂದ ಅವರು, ಸಮಾಜಗಳು ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕು. ಶಾಸಕ ಪೊನ್ನಣ್ಣ ಕೇವಲ
(ಮೊದಲ ಪುಟದಿಂದ) ಕೊಡವರಿಗೆ ಮಾತ್ರ ಶಾಸಕರಲ್ಲ ಎಂದು ನುಡಿದರು. ರಸ್ತೆ ಬದಿ ಕಾಡು ಕಡಿಯುವ, ಚರಂಡಿ ವ್ಯವಸ್ಥೆ ಸರಿಪಡಿಸುವ ಕಾರ್ಯಗಳು ಇನ್ನೂ ನಡೆದಿಲ್ಲ. ಶಾಸಕರಾದವರು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ಎಂದು ಸಲಹೆಯಿತ್ತ ರಂಜನ್, ಹಾಲಿ ಶಾಸಕರುಗಳು, ನಾವು ಜಿಲ್ಲೆಯ ಅಭಿವೃದ್ಧಿಗೆ ತಂದ ಅನುದಾನದಲ್ಲಿ ಅರ್ಧದಷ್ಟನ್ನಾದರೂ ಐದು ವರ್ಷದ ಅಧಿಕಾರಾವಧಿಯಲ್ಲಿ ತರಲಿ ನೋಡೋಣ ಎಂದು ಸವಾಲೆಸೆದರು. ತಮ್ಮ ಅವಧಿಯಲ್ಲಿ ಕಾರ್ಡ್ಸ್ ಕ್ಲಬ್ಗಳಿಗೆ ಅನುಮತಿ ನೀಡಿರಲಿಲ್ಲ ಆದರೆ, ಪ್ರಸ್ತುತ ಮೂರು ಕಡೆಗಳಲ್ಲಿ ಕಾರ್ಡ್ಸ್ ಕ್ಲಬ್ಗಳಿಗೆ ಅನುಮತಿ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರನ್ನು ವೇದಿಕೆಯಲ್ಲಿ ಕೂರಿಸುವ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇಂಧನ ಬೆಲೆಯನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿದ್ದರ ವಿರುದ್ಧ ವಿರೋಧ ಪಕ್ಷವಾಗಿ ನಾವು ಪ್ರತಿಭಟಿಸಿದ್ದೇವೆ. ಇದಕ್ಕೆ ಜಾತೀಯ ಬಣ್ಣ ಹಚ್ಚಿ ಸಮಾಜವನ್ನು ಒಡೆಯುವ ಕೆಲಸವಾಗಬಾರದು ಎಂದರು. ಸಮಾಜಗಳಿಂದ ಹೇಳಿಕೆ ಕೊಡಿಸುವುದು ಸರಿಯಲ್ಲ. ಸರ್ವಾಧಿಕಾರ ಧೋರಣೆ ಕೊಡಗಿನಲ್ಲಿ ನಡೆಯುವುದಿಲ್ಲ ಎಂದರಲ್ಲದೆ, ಪೊನ್ನಣ್ಣ ಅವರು ತಮ್ಮನ್ನು ತಿದ್ದಿಕೊಂಡು ಒಳ್ಳೆಯ ಶಾಸಕರಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಪ್ರತಿಭಟಿಸುವುದು ಸಂವಿಧಾನಬದ್ಧ ಹಕ್ಕು. ಅದರಂತೆ ಪ್ರತಿಭಟನೆ ಎಲ್ಲಾ ಕಡೆ ನಡೆದಿದೆ. ಆದರೆ, ವೀರಾಜಪೇಟೆಯಲ್ಲಿ ಅಲ್ಲಿನ ಶಾಸಕರ ಒತ್ತಡದಿಂದ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿನ ಸೋಲಿನಿಂದಾಗಿ ಕಾಂಗ್ರೆಸ್ನಿAದ ಬಿಜೆಪಿ ಕಾರ್ಯಕರ್ತರ ದಮನಕ್ಕೆ ಪ್ರಯತ್ನ ನಡೆಯುತ್ತಿದ್ದು, ಇದನ್ನು ಖಂಡಿಸುತ್ತೇವೆ ಎಂದರು. ಕೊಡವ ಶಾಸಕ ಎಂದು ಹೇಳಿಕೊಂಡು ಬಿಜೆಪಿ ಪ್ರತಿಭಟನೆ ಮಾಡಿಲ್ಲ. ಸಮಾಜಗಳು ಸಮಾಜದ ಸಂಸ್ಕೃತಿ, ಭಾಷೆ ಬೆಳೆಸುವ ಕೆಲಸ ಮಾಡಬೇಕೇ ಹೊರತು, ಸಮಾಜದೊಳಕ್ಕೆ ರಾಜಕೀಯವನ್ನು ತರಬಾರದು ಎಂದು ಹೇಳಿದರು. ಬಿಜೆಪಿ ಶಾಸಕರ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿದ್ದು, ಈ ನಿಟ್ಟಿನಲ್ಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದ ರವಿಕಾಳಪ್ಪ ಪ್ರತಿಕೃತಿ ದಹನ ಸಂಸ್ಕೃತಿಯನ್ನು ಕೊಡಗಿಗೆ ಪರಿಚಯಿಸಿದ್ದೇ ಕಾಂಗ್ರೆಸ್ ಎಂದು ಆಪಾದಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಜಿಲ್ಲೆಗೆ ಒಂದು ವರ್ಷದಲ್ಲಿ ಕಾಂಗ್ರೆಸ್ ಶಾಸಕರ ಕೊಡುಗೆ ಏನು ಎಂಬುದನ್ನು ಶಾಸಕರು ತೋರಿಸಲಿ ಎಂದು ನುಡಿದರು. ಜಿಲ್ಲೆಯಲ್ಲಿ ಜಾತಿ ಸಂಘರ್ಷ ಉಂಟಾದರೆ ಅದಕ್ಕೆ ಪೊನ್ನಣ್ಣ ಅವರೇ ಹೊಣೆಗಾರರಾಗುತ್ತಾರೆ. ಕಾಂಗ್ರೆಸ್ ಪ್ರಮುಖ ತೆನ್ನೀರ ಮೈನಾ ಅವರು, ಬಿಜೆಪಿ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ಬಿಜೆಪಿಯವರ ವಿರುದ್ಧ ‘ಕೋತಿಗಳು ಸರ್ ಕೋತಿಗಳು ಕಳ್ಳು ಕುಡಿದ ಕೋತಿಗಳು’ ಎಂಬ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹಗಳನ್ನು ಬರೆದಿದ್ದು, ಇದರ ವಿರುದ್ಧ ಎಸ್ಪಿಗೆ ದೂರು ನೀಡಿದ್ದೇವೆ. ಎಫ್ಐಆರ್ ದಾಖಲಿಸದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ನುಡಿದರು.
ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ. ಲೋಕೇಶ್ ಉಪಸ್ಥಿತರಿದ್ದರು.