ಮಡಿಕೇರಿ, ಜೂ. ೨೩: ಅವಸಾನದತ್ತ ಮುಖ ಮಾಡಿರುವ ಮಳೆ ಕಾಡುಗಳನ್ನು ರಕ್ಷಿಸದೇ ಹೋದರೆ ಉಳಿಗಾಲ ಇಲ್ಲ. ಮಳೆ ಕಾಡು ಮಾತ್ರವಲ್ಲ, ಎಲ್ಲ ಬಗೆಯ ಕಾಡುಗಳನ್ನು ಸಂರಕ್ಷಿಸಲೇಬೇಕು ಎಂಬ ಒಕ್ಕೊರಲ ಕೂಗು ಕೊಡಗಿನ ಗಡಿಭಾಗ ಮಾಕುಟ್ಟದ ದಟ್ಟವಾದ ಮಳೆಕಾಡಿನೊಳಗಿಂದ ವ್ಯಕ್ತವಾಯಿತು.

ದಟ್ಟ ಕಾನನದ ಮಧ್ಯೆ ವೀರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟದ ವಲಯದ ಅರಣ್ಯಾಧಿ ಕಾರಿಗಳ ಕಚೇರಿ ಆವರಣದಲ್ಲಿ ನಡೆದ ‘ವಿಶ್ವ ಮಳೆ ಕಾಡು’ ದಿನಾಚರಣೆಯಲ್ಲಿ ಮಳೆಕಾಡಿನ ಅಳಿವು ಉಳಿವುಗಳ ಕುರಿತೇ ಚರ್ಚೆಗಳು ನಡೆದವು. ಇಡೀ ದಿನ ನಡೆದ ಅಪರೂಪದ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಹಲವು ವಿಷಯಗಳನ್ನು ಕುರಿತು ಮಾತನಾಡಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ. ದೇವಗಿರಿ ಅವರು ಮಾತನಾಡಿ, ‘ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ಇರುವ ಮಳೆಕಾಡುಗಳು ವರ್ಷಗಳು ಉರುಳಿದಂತೆ ಕ್ಷೀಣಿಸುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ೧೦ ವರ್ಷಗಳಲ್ಲಿ ಭೂಮಿಯ ತಾಪಮಾನ ೬ ಡಿಗ್ರಿಯಷ್ಟು ಹೆಚ್ಚಾಗುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದರು.

ನಂತರ, ಅವರು ಪ್ರಪಂಚದಲ್ಲಿ ಮಳೆಕಾಡುಗಳ ಹಂಚಿಕೆ, ಸಮಭಾಜಕ ವೃತ್ತದಲ್ಲೇ ಅತಿ ಹೆಚ್ಚು ಕಾಡುಗಳು ಏಕಿವೆ ಎಂಬ ಕುರಿತು, ಜಾಗತಿಕ ತಾಪಮಾನ ಕುರಿತು, ಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಮಾತನಾಡಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ ಅವರು ಮಳೆಕಾಡುಗಳ ಪ್ರಯೋಜನ ಮತ್ತು ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.

ವಲಯ ಅರಣ್ಯಾಧಿಕಾರಿ ಸುಹನಾ ಹರೀಶ್ ಅತ್ತಾವರ್ ಮಾತನಾಡಿ, ‘ಮಾಕುಟ್ಟ ವಲಯದಲ್ಲಿ ಕಳೆದ ೨೦ ವರ್ಷದಲ್ಲಿ ಸರಾಸರಿ ೫,೫೦೦ ಮಿ.ಮೀನಷ್ಟು ಮಳೆಯಾಗಿದೆ. ಇಲ್ಲಿರುವ ಮಳೆಕಾಡಿನಲ್ಲಿ ಅಪಾರ ವಾದ ಜೀವವೈವಿಧ್ಯ ಇದೆ’ ಎಂದು ಹೇಳಿದರು. ಈ ಮಳೆಕಾಡುಗಳು ವಿಶ್ವದಲ್ಲಿರುವ ಶೇ. ೨೦ರಷ್ಟು ಜೀವವೈವಿಧ್ಯವನ್ನು ಹೊಂದಿವೆ. ಮಳೆ ಕಾಡುಗಳನ್ನು ಕಾಪಾಡಿಕೊಂಡರೆ ಈ ಜೀವವೈವಿಧ್ಯಗಳೂ ಉಳಿಯುತ್ತವೆ ಎಂದರು.

ಪೊನ್ನAಪೇಟೆಯ ಅರಣ್ಯ ಮಹಾವಿದ್ಯಾಲದಯ ಉಪನ್ಯಾಸ ಕರು, ವಿದ್ಯಾರ್ಥಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು, ಶಿವಮೊಗ್ಗ ಇರುವಕ್ಕಿ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಮಾಕುಟ್ಟ ಕಿರಿಯ ಪ್ರಾಥಮಿಕ ಮಲಯಾಳಂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹೆಗ್ಗಳದ ಗ್ರಾಮಸ್ಥರು ಸುಮಾರು ೨ ಕಿ.ಮೀವರೆಗೆ ಮಳೆಕಾಡು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಕಿರುರಸಪ್ರಶ್ನೆ ಕಾರ್ಯ ಕ್ರಮವೂ ನಡೆಯಿತು.

ಶೃಂಗೇರಿಯವರ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಉಡುಪ ಹಾಗೂ ಪ್ರೊ.ಸತೀಶ್ ಅವರು ನಡಿಗೆ ವೇಳೆ ಜೀವವೈವಿಧ್ಯದ ಪರಿಚಯ ಮಾಡಿಸಿದರು. ಡಿಸಿಎಫ್ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಕೆ.ಎ. ನೆಹರು ಸ್ವಾಗತಿಸಿದರು. ಡಿಎಆರ್ ಎಫ್‌ಓ ಕಿರಣ್ ಗಣೇಶ್ ಆಚಾರಿ ನಿರೂಪಣೆ ಮಾಡಿದರು. ವಿಭಾಗದ ಎಲ್ಲ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಎಲ್ಲ ಮುಂಚೂಣಿ ಸಿಬ್ಬಂದಿ ಭಾಗವಹಿಸಿದ್ದರು.