ಸೋಮವಾರಪೇಟೆ, ಜೂ.೨೩ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮೂವರು ತಜ್ಞ ವೈದ್ಯರನ್ನು ನೇಮಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಆ ಮೂಲಕ ಕಳೆದ ಹಲವು ಸಮಯಗಳಿಂದ ವೈದ್ಯರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದ ಈ ಭಾಗದ ಸಾರ್ವಜನಿಕರಿಗೆ ಸಮಾಧಾನ ಮೂಡಿದೆ.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ‘ಶಕ್ತಿ’ಯಲ್ಲಿ ಸವಿಸ್ತಾರ ವರದಿ ಪ್ರಕಟವಾಗಿತ್ತು. ಇದಾದ ತರುವಾಯ ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ನಿರ್ದೇಶಕರ ಕಚೇರಿಯಿಂದ ಆದೇಶ ಹೊರಬಂದಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಮೂವರು ವೈದ್ಯರನ್ನು ನಿಯೋಜಿಸಲಾಗಿದೆ.

ವೈದ್ಯರ ಕೊರತೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಬದಲಿ ವ್ಯವಸ್ಥೆಗಾಗಿ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಸಾರ್ವಜನಿಕ ಆಸ್ಪತ್ರೆಯಿಂದ ಓರ್ವ ವೈದ್ಯರನ್ನು ವಾರದಲ್ಲಿ ೨ ದಿನಗಳು, ಇನ್ನು ಈರ್ವರು ವೈದ್ಯರನ್ನು ವಾರದಲ್ಲಿ ಒಂದು ದಿನ ಕೌನ್ಸೆಲಿಂಗ್ ಮುಗಿಯುವವರೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಿ ಆದೇಶಿಸಲಾಗಿದೆ.

ಅದರಂತೆ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರಸೂತಿ ಮತ್ತು ಸ್ತಿçà ರೋಗ ತಜ್ಞರಾದ ಡಾ. ಆಲಿಯಾ ತಮಕಿನತ್ ಬಾನು ಅವರನ್ನು ವಾರದ ೨ ದಿನಗಳು (ಪ್ರತಿ ಸೋಮವಾರ ಮತ್ತು ಶುಕ್ರವಾರ), ಮಕ್ಕಳ ತಜ್ಞರಾದ ಡಾ. ಮಂಜುನಾಥ್ ಅವರನ್ನು ವಾರದ ಸೋಮವಾರ, ಅರೆವಳಿಕೆ ತಜ್ಞರಾದ ಡಾ. ರವಿಶಂಕರ್ ಅವರನ್ನು ವಾರದ ಬುಧವಾರ ನಿಯುಕ್ತಿಗೊಳಿಸಲಾಗಿದೆ.

ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಮನಗಂಡ ಡಾ. ಮಂತರ್ ಗೌಡ ಅವರು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿ, ತಾತ್ಕಾಲಿಕವಾಗಿ ವೈದ್ಯರುಗಳನ್ನು ನಿಯೋಜನೆ ಮಾಡಲು ಕ್ರಮ ವಹಿಸಿದ್ದಾರೆ.