ಸೋಮವಾರಪೇಟೆ,ಜೂ.೨೩: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಿಯೋಜಿತಗೊಂಡಿರುವ ಹಲವಷ್ಟು ವೈದ್ಯ ಹುದ್ದೆ ಖಾಲಿಯಿರುವ ನಡುವೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ಚಿಕಿತ್ಸಾಲಯ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಸರ್ಕಾರಿ ಆಸ್ಪತ್ರೆಗೆ ತಿಂಗಳಿಗೆ ಸರಾಸರಿ ೬೦೦ಕ್ಕೂ ಅಧಿಕ ರೋಗಿಗಳು ದಂತ ಸಂಬAಧಿತ ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಮೂಲತಃ ಕೊಡಗಿನವರೇ ಆದ ಮಡಿಕೇರಿಯ ಡಾ. ಅಫ್ರಿನ್ ಅವರು ರೂಟ್ ಕೆನಲ್, ಫಿಲ್ಲಿಂಗ್, ಹುಳುಕು ಹಲ್ಲು ಕೀಳುವುದು ಸೇರಿದಂತೆ ಇತ್ಯಾದಿ ಚಿಕಿತ್ಸೆಗಳನ್ನು ರೋಗಿಗಳಿಗೆ ಒದಗಿಸುತ್ತಿದ್ದು, ಈ ಭಾಗದಲ್ಲಿ ದಂತ ಚಿಕಿತ್ಸೆ ಪಡೆಯಲು ಅವಶ್ಯವಿರುವ ರೋಗಿಗಳಿಗೆ ವರದಾನವಾಗಿದೆ. ಕಳೆದ ೨ ವರ್ಷಗಳ ಹಿಂದೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಿಯುಕ್ತಿಗೊಂಡ ಡಾ. ಅಫ್ರಿನ್ ಅವರು, ನಂತರದ ದಿನಗಳಲ್ಲಿ ದಂತ ಚಿಕಿತ್ಸೆಗೆ ಬೇಕಾದ ಅವಶ್ಯಕ ವ್ಯವಸ್ಥೆ, ಉಪಕರಣಗಳ ಬೇಡಿಕೆಯನ್ನು ಪೂರೈಸಿಕೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ, ಸರ್ಕಾರ ನಿಗದಿಪಡಿಸಿರುವ ಅತೀ ಕಡಿಮೆ ಶುಲ್ಕದಲ್ಲಿ ರೂಟ್ ಕೆನಲ್, ಫಿಲ್ಲಿಂಗ್, ಹುಳುಕು ಹಲ್ಲು ಕೀಳುವುದು, ಡೆಂಟಲ್ ಕ್ಲೀನಿಂಗ್ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇವರ ಸೇವೆಗೆ ರೋಗಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ದಂತ ಚಿಕಿತ್ಸಾ ವಿಭಾಗದಲ್ಲಿ ದಂತ ಭಾಗ್ಯ ಯೋಜನೆಯಡಿ ಈವರೆಗೆ ೭೦ ಮಂದಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ. ೪೫ ವರ್ಷ ಮೇಲ್ಪಟ್ಟ ವಯಸ್ಕರು, ಬಿಪಿಎಲ್ ಕಾರ್ಡ್ ಹೊಂದಿರುವವರು, ಭಾಗಶಃ ಹಾಗೂ ಸಂಪೂರ್ಣ ಹಲ್ಲು ಕಳೆದುಕೊಂಡಿರುವ ಮಂದಿಗೆ ಸರ್ಕಾರದ ವತಿಯಿಂದಲೇ ನೂತನ ಹಲ್ಲಿನ ಸೆಟ್ ಒದಗಿಸುವ ಯೋಜನೆ ಇದಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸುವ ಉದ್ದೇಶದಿಂದ ವೀರಾಜಪೇಟೆಯ ಕೊಡಗು ದಂತ ಮಹಾವಿದ್ಯಾಲಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದರೊಂದಿಗೆ ವಿವಿಧ ಗಿರಿಜನ ಹಾಡಿಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಶಿಬಿರಗಳನ್ನು ಆಯೋಜಿಸಿ ಹಲ್ಲುಗಳ ರಕ್ಷಣೆ, ಹಲ್ಲುಗಳ ಆರೋಗ್ಯ ಕಾಪಾಡುವಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ದಂತ ಚಿಕಿತ್ಸಾಲಯದಿಂದ ಮಾಡಲಾಗಿದೆ. ಬಾಯಿ ಕ್ಯಾನ್ಸರ್ ಇರುವ ರೋಗಿಗಳನ್ನು ಪತ್ತೆಹಚ್ಚಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲು ಶ್ರಮಿಸಲಾಗಿದೆ.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ಚಿಕಿತ್ಸೆ ವಿಭಾಗದಲ್ಲಿ ಕೇವಲ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಿಂದಷ್ಟೇ ಅಲ್ಲದೇ ಗ್ರಾಮೀಣ ಭಾಗದಿಂದ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಹಾಸನ ಜಿಲ್ಲೆಯ ರಾಮನಾಥಪುರ, ಕೊಣನೂರು, ಮರಿಯಾನಗರ ಭಾಗದಿಂದಲೂ ರೋಗಿಗಳು ಆಗಮಿಸುತ್ತಿದ್ದಾರೆ.

ಪ್ರಸ್ತುತ ದಂತ ಚಿಕಿತ್ಸಾ ಅಧಿಕಾರಿಂiÀiಗಿ ಡಾ. ಎಂ.ಹೆಚ್. ಅಫ್ರಿನ್ ಅವರು ವಾರದ ಏಳು ದಿನಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಎನ್‌ಹೆಚ್‌ಎಂ ಅಡಿಯಲ್ಲಿ ಡಾ. ಯಶ್ವಿನ್ ಅವರು ವಾರದ ಒಂದು ದಿನ ಸೇವೆ ಸಲ್ಲಿಸುತ್ತಿದ್ದಾರೆ. ಡೆಂಟಲ್ ಹೈಜೆನಿಸ್ಟ್ ಆಗಿ ಚೇತನ್, ಡೆಂಟಲ್ ಅಸಿಸ್ಟೆಂಟ್ ಆಗಿ ಗಿರೀಶ್ ಅವರುಗಳು ಡಾ. ಅಫ್ರಿನ್ ಹಾಗೂ ಯಶ್ವಿನ್ ಅವರೊಂದಿಗೆ ಸಹಕರಿಸುತ್ತಿದ್ದಾರೆ. ಒಟ್ಟಾರೆ ಹಲವು ಇಲ್ಲಗಳ ನಡುವೆ ನಲುಗುತ್ತಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯು, ದಂತ ಚಿಕಿತ್ಸೆಯ ವಿಚಾರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರ ಸಮಾಧಾನಕ್ಕೆ ಕಾರಣವಾಗಿದೆ. -ವಿಜಯ್