ಶನಿವಾರಸಂತೆ, ಜೂ. ೨೨: ಶಾಲಾ ಬಸ್ಸೊಂದು ಬೈಕಿಗೆ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ. ಸಮೀಪದ ದೊಡ್ಡಳ್ಳಿ ಗ್ರಾಮದ ಜಯಪ್ಪ(೫೩) ತಮ್ಮ ಪುತ್ರ ಮೌನಿತ್ನನ್ನು(೧೭) ಬೈಕ್ ಹಿಂಬದಿ ಕೂರಿಸಿಕೊಂಡು ಸ್ಥಳೀಯ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಶಾಲೆಗೆ ಬಿಡಲು ಬರುತ್ತಿರುವಾಗ ಎದುರುಗಡೆಯಿಂದ ಬಂದ ವಿಘ್ನೇಶ್ವರ ವಿದ್ಯಾಸಂಸ್ಥೆಯ ಬಸ್ ಪಶು ವೈದ್ಯಕೀಯ ಆಸ್ಪತ್ರೆಯ ಮುಂಭಾಗ ಡಿಕ್ಕಿಯಾಗಿದೆ.
ಅಪಘಾತದಲ್ಲಿ ರಸ್ತೆಗೆ ಬಿದ್ದ ಬೈಕ್ ಸವಾರ ಜಯಪ್ಪ ಹಾಗೂ ಮೌನಿತ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆ ದಾಖಲಿಸಲಾಗಿದ್ದು, ಬೈಕ್ ಜಖಂಗೊAಡಿದೆ.
ಘಟನೆ ಸ್ಥಳಕ್ಕೆ ವೃತ್ತನಿರೀಕ್ಷಕ ಪ್ರೀತಂ, ಪಿಎಸ್ಐ ಗೋವಿಂದ್ ರಾಜ್ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳು ಜಯಪ್ಪ ಅವರ ತಮ್ಮ ಗುರುಮೂರ್ತಿ ಅವರು ಬಸ್ ಚಾಲಕ ಸಂಜಯ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.