ಮಡಿಕೇರಿ, ಜೂ. ೨೩: ನಿತ್ಯ ಹರಿದ್ವರ್ಣೆಯ ಪ್ರಕೃತಿ ಮಾತೆಯನ್ನು ಪದಪುಂಜಗಳಲ್ಲಿ ವರ್ಣಿಸಿದ ಕವಿಗಳು ಪ್ರಕೃತಿ ಉಳಿಸಿ ಎಂಬ ಸಂದೇಶ ಸಾರಿದರು.
ನಗರದ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ನಡೆದ ಪ್ರಕೃತಿ-ಪರಿಸರ ಕುರಿತ ಕವಿಗೋಷ್ಠಿಯಲ್ಲಿ ೨೫ ಮಂದಿ ಕವನ ವಾಚಿಸಿದರು. ಹಸಿರೂರ ಸಿಂಗಾರಿ, ಪರಿಸರ ಹನನ -ಮನನ, ಪರಿಸರ ಹಾಗೂ ಸನಾತನ ಧರ್ಮ, ಕಾಡಿದ್ದರೆ ನಾಡು, ಪರಿಸರ ಕಾಪಾಡಿ, ಪ್ರಕೃತಿಯ ಉಸಿರು, ಸಸ್ಯ ಶಾಮಲೆ, ಮಳೆ ಒಂದು ಸಂಭ್ರಮ, ಸುಕೃತವು ನಮ್ಮದು ಹೀಗೆ ಸೃಷ್ಟಿ ಹಾಗೂ ಪರಿಸರಕ್ಕೆ ಸಂಬAಧಪಟ್ಟ ಕವನಗಳನ್ನು ಕವಿಗಳು ವಾಚಿಸಿದರು.
‘ಹಸಿರೂರ ಸಿಂಗಾರಿ ಹೊಂಬಣ್ಣ ತಳೆದಾಗ ನಮ್ಮೂರ ನವಿಲುಗಳು ಆಡುತ್ತಾವೋ ನಲಿದಾಡುತಾವೋ..’ ಎಂದು ಮಡಿಕೇರಿಯ ರಾಧಿಕಾ ವಿಶ್ವನಾಥ್ ಕವನ ವಾಚಿಸಿದರೆ, ‘ಗೊಟ್ಟೆಯ ಹಣ್ಣಿನ ಮರವು ಬಿಟ್ಟಿದೆ ಗೊಂಚಲು ಗೊಂಚಲು ಹಣ್ಣುಗಳ ತಿನ್ನಲು ಬಂದವು ವಿವಿಧ ಹಕ್ಕಿಗಳು ಮಧುರ ಸ್ವರದಲ್ಲಿ ಹಾಡುತ್ತಾ.’ ಎಂದು ಭಾಗಿರಥಿ ಹುಲಿತಾಳ ಸೃಷ್ಟಿಯ ವೈಭವವನ್ನು ಕವನದ ಮೂಲಕ ಪ್ರಸ್ತುತ ಪಡಿಸಿದರು.
ಚಿಕ್ಕಅಳುವಾರದ ರಾಜೇಶ್, ಕಗ್ಗೋಡ್ಲುವಿನ ಅಪರ್ಣ ಹುಲಿತಾಳ, ಪೇರಿಯಂಡ ಯಶೋಧ , ಕೋಂಪುಳಿರ ಇಂದಿರಾವತಿ, ಮುಕ್ಕಾಟಿ ಹರಿಣಿ ಗಿರೀಶ್, ಉಳುವಂಗಡ ಕಾವೇರಿ ಉದಯ, ಪ್ರಗತಿ ಕೇಡನ, ಕವಿತ ಕೆ.ಎನ್, ರಜಿತ ಕಾರ್ಯಪ್ಪ, ಗೀತಾಂಜಲಿ, ವಿಮಲಾ ದಶರಥ, ಮಧುರ ಪಾರೆರ, ರಂಜಿತ ಪಾಲೊದರ, ಶಿವದೇವಿ ಅವನಿಶ್ಚÀಂದ್ರ, ಡಾ. ಎ.ಎನ್. ಗಾಯತ್ರಿ, ವೈಲೇಶ್ ಹಾಗೂ ಸುಶೀಲ ಕುಶಾಲಪ್ಪ ಸೇರಿದಂತೆ ೨೫ ಮಂದಿ ಕವಿಗಳು ಕವನಗಳು ಸುಂದರವಾಗಿ ಮೂಡಿಬಂದು ಹೃನ್ಮನಗಳನ್ನು ಸೆಳೆದವು. ಕವನವಾಚನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಸಿ.ಎಸ್ ಸುರೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹದವಾಗಿ ಮಳೆ ಬಂದು ಭೂಮಿ ನೀರು ಇಂಗಿ ಜಲ ನೆಲ ಪರಿಸರ ಸಂಪತ್ಭರಿತವಾಗಿ ನಳನಳಿಸುತ್ತಿತ್ತು. ಇದೀಗ ಮಳೆ ದೂರವಾಗಿದೆ. ಅದೇ ರೀತಿ ಸಾಹಿತ್ಯವು ಜನಮಾನಸದಿಂದ ದೂರವಾಗುತ್ತಿದೆ ಎಂದು ವಿಷಾದಿಸಿದ ಅವರು, ಕತೆ, ಕವನ, ಕಾದಂಬರಿ, ವಿಭಿನ್ನ ಸಾಹಿತ್ಯ ಪ್ರಕಾರಗಳು ಬದುಕನ್ನು ಶ್ರೀಮಂತಗೊಳಿಸುತ್ತಿದ್ದವು. ಮೇರು ಕನ್ನಡ ಕವಿಗಳು ಕನ್ನಡದ ಕಂಪನ್ನು ಹೊರ ಸೂಸಿದ್ದಾರೆ. ಕಾವ್ಯ ಬದುಕಿನ ಜೀವಾಳವಾಗಿದೆ. ಗಟ್ಟಿಯಾದ ಸಮೃದ್ಧವಾದ ಕಾವ್ಯರಚನೆಯಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತೀರ್ಪುಗಾರರಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಪ್ರಕೃತಿ ಪರಿಸರ ಸಂಬAಧಿತ ಕವಿಗೋಷ್ಠಿಯಲ್ಲಿ ಉತ್ತಮ ಕವನಗಳು ರಚನೆಯಾಗಿವೆ. ಕಾವ್ಯರಚನೆಯಲ್ಲಿ ಸಾಹಿತ್ಯದೊಂದಿಗೆ ಲಯ, ಮಾಧುರ್ಯ ಅಗತ್ಯ. ಕವನ ಸರಳವಾಗಿರಬೇಕು. ಅರ್ಥಗರ್ಭಿತ ವಾಗಿರಬೇಕು ಎಂದು ತಿಳಿಸಿದರು.
ಪರಿಷದ್ ಪ್ರಧಾನ ಕಾರ್ಯದರ್ಶಿ ಬಬ್ಬೀರÀ ಸರಸ್ವತಿ ಮಾತನಾಡಿ, ಸಂಘಟನೆ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪರಿಷತ್ತು ರೂಪಿಸುವ ಕಾರ್ಯಕ್ರಮಗಳ ಮೂಲಕ ಬಾಂಧವ್ಯ ಗಟ್ಟಿಯಾಗಬೇಕು ಎಂದರು. ಸಮಿತಿ ಸದಸ್ಯರಾದ ಸುಶೀಲ ಕುಶಾಲಪ್ಪ, ತಮ್ಮಯ್ಯ, ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಧಿಕಾ ವಿಶ್ವನಾಥ್ ‘ಹಸಿರೂರ ಸಿಂಗಾರಿ’ ಕವನವಾಚನದ ಮೂಲಕ ಪ್ರಥಮ ಬಹುಮಾನ ಗಳಿಸಿದರು. ‘ಸುಕೃತವು ನಮ್ಮದು’ ಕವನ ವಾಚಿಸಿದ ವೈಲೇಶ್ ಪಿ.ಎಸ್. ದ್ವಿತೀಯ ಸ್ಥಾನ ಪಡೆದರು. ಪರಿಸರದ ರಕ್ಷಣೆ ಕವನದ ಮೂಲಕ ಸುಶೀಲ ಕುಶಾಲಪ್ಪ ತೃತೀಯ ಸ್ಥಾನ ಪಡೆದರು. ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕವಿ- ಕವಯತ್ರಿಯರಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ, ಜಿಲ್ಲಾ ಸಮಿತಿ ಸದಸ್ಯರಾದ ಜಾನಕಿ ಮಾಚಯ್ಯ, ಕಡ್ಲೇರ ಆಶಾ ಧರ್ಮಪಾಲ್, ಪ್ರೀತಿ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.