(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜೂ. ೨೧: ಕೊಡಗು ಜಿಲ್ಲೆಯಲ್ಲಿ ೨೦೧೬ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದ್ದ ೨೯ ಕ್ಷೇತ್ರಗಳು ಇದೀಗ ಮರುಸ್ಥಾಪನೆಯಾಗಿದ್ದು, ಕ್ಷೇತ್ರಗಳ ಸಂಖ್ಯೆ ಗಡಿ, ಸದಸ್ಯರ ಸಂಖ್ಯೆ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಜುಲೈ ೩ ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ಸೀಮಾಗಡಿ ನಿರ್ಣಯ ಆಯೋಗವು ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯನ್ನು ೨೯ ರಿಂದ ೨೫ಕ್ಕೆ ಇಳಿಸಿಲಾಗಿತ್ತು. ಇದಕ್ಕೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಆಕ್ಷೇಪ ಕೂಡ ವ್ಯಕ್ತವಾಗಿತ್ತು.

ಕೊಡಗು ಜಿಲ್ಲೆಯ ಇಬ್ಬರು ಶಾಸಕದ್ವಯರು ವಿಧಾನಸಭೆಯಲ್ಲಿ ಇದರ ಬಗ್ಗೆ ಗಮನ ಸೆಳೆದಿದ್ದರು.

ನಂತರ ೨೦೨೪ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ತರಲಾಗಿತ್ತು.

೨೦೨೩ ಡಿಸೆಂಬರ್ ತಿಂಗಳಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯ ಸ್ಥಾನ ಹಾಗೂ ವರ್ಗವಾರು ಮೀಸಲು ಸಂಖ್ಯೆಯನ್ನು ಪ್ರಕಟಿಸಿತ್ತು.

ಆದರೆ ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆಗೆ ತಿದ್ದುಪಡಿ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸ್ಥಾನಗಳ ಸಂಖ್ಯೆ, ವರ್ಗವಾರು ಮೀಸಲಾತಿ ಸಂಖ್ಯೆ ಪ್ರಕಟಗೊಂಡಿರಲಿಲ್ಲ.

ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಸ್ಥಾನ ಗಳನ್ನು ೨೯ ರಿಂದ ೨೫ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ, ಗಡಿ ಕ್ಷೇತ್ರಗಳ ಸಂಖ್ಯೆ ಪ್ರಕಟಗೊಂಡಿದ್ದು, ೨೦೧೬ರಲ್ಲಿ ಇದ್ದ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಈ ಬಾರಿ ಕೆಲವೊಂದು ಕ್ಷೇತ್ರಗಳು ಅದಲು-ಬದಲಾಗಿದೆ. ಅದಲ್ಲದೇ ಕಳೆದ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದ್ದ ಕ್ಷೇತ್ರಗಳ ಹೆಸರು ಈ ಬಾರಿ ಬದಲಾವಣೆ ಮಾಡಲಾಗಿದೆ.

(ಮೊದಲ ಪುಟದಿಂದ) ಅದಲ್ಲದೇ ಮಡಿಕೇರಿ-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಗ್ರಾಮ ಪಂಚಾಯಿತಿಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದೆ.

ನಾಪೋಕ್ಲು ಕ್ಷೇತ್ರದೊಂದಿಗೆ ಸೇರಿಕೊಂಡಿದ್ದ ಹೊದ್ದೂರು ಗ್ರಾಮ ಪಂಚಾಯಿತಿ ಭಾಗವನ್ನು ಕಾಂತೂರು ಮೂರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ.

ಅದಲ್ಲದೇ ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿದ್ದ ಹಾಲುಗುಂದ ಗ್ರಾಮ ಪಂಚಾಯಿತಿ ಭಾಗವನ್ನು ಇದೀಗ ಹಾಲುಗುಂದ ಎಂದು ಹೊಸ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಸ್ಥಾಪಿಸಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೭, ಸೋಮವಾರಪೇಟೆ ೬, ಕುಶಾಲನಗರ ೫, ವೀರಾಜಪೇಟೆ ೫, ಪೊನ್ನಂಪೇಟೆ ತಾಲೂಕಿನಲ್ಲಿ ೬ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಸೇರಿ ಒಟ್ಟು ೨೯ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಜಿಲ್ಲೆಯಲ್ಲಿ ಮರುಸ್ಥಾಪನೆಯಾಗಿದೆ.

ಜುಲೈ ಎರಡನೇ ವಾರದಲ್ಲಿ ಕ್ಷೇತ್ರವಾರು ಮೀಸಲು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಮಿನಿ ಸಮರಕ್ಕೆ ಎಲ್ಲಾ ಪಕ್ಷಗಳು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ.