ಮಡಿಕೇರಿ, ಜೂ. ೨೧: ಚೆಟ್ಟಿಮಾನಿಯ ಸಾಂದೀಪನಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎಲ್ಲಾ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಸಿ ನೆಡುವುದರ ಮೂಲಕ ಆಚರಿಸಿದರು.
ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಂಗವಾಗಿ ಭಾಷಣ ಹಾಗೂ ಕಿರು ನಾಟಕವನ್ನು ಪ್ರದರ್ಶಿಸಿದರು. ಶಿಕ್ಷಕಿ ಲೀಲಪ್ರಭ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ ಪರಿಸರವನ್ನು ಉಳಿಸಿ ಬೆಳೆಸುವುದು ಹೇಗೆ ಎನ್ನುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ವಿವಿಧ ರೀತಿಯ ಸಸಿಗಳನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನೆಡುವ ಮೂಲಕ ಮಕ್ಕಳಲ್ಲಿ ‘ಹಸಿರು ಬೆಳೆಸಿ, ನಾಡು ಉಳಿಸಿ, ಆರೋಗ್ಯ ವೃದ್ಧಿಸಿ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹೆಚ್ಚಿನ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಕೆ.ಆರ್. ಯೋಗೇಶ್, ಮುಖ್ಯ ಶಿಕ್ಷಕಿ ಸೌಜನ್ಯ ಯೋಗೇಶ್ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.