ವೀರಾಜಪೇಟೆ, ಜೂ. ೨೧: ಕೇವಲ ರೋಗಿಗಳನ್ನಷ್ಟೇ ಅಲ್ಲ ಚಿಕಿತ್ಸಾಲಯಗಳನ್ನು ಕೂಡ ಜೀವಂತ ವಾಗಿರಿಸಬೇಕು ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಸಾರ್ವಜನಿಕ ಆಸ್ಪತ್ರೆಯ ಕುಂದುಕೊರತೆಗಳನ್ನು ಶಾಸಕರು ಆಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ಆಸ್ಪತ್ರೆಯ ೨ನೇ ಮಹಡಿಯಲ್ಲಿ ತಾಲೂಕು ಮಟ್ಟದ ಸೆಂಟ್ರಲ್ ಲ್ಯಾಬ್ ಬಿಪಿಹೆಚ್‌ಯು ಘಟಕದ ಹೊಸ ಕಟ್ಟಡ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮಹಡಿಯಲ್ಲಿ ಐಸೋಲೇಷನ್ ವಾರ್ಡ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ವಿವರಿಸಿದರು.

ಈ ಸಂಬAಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಅವರ ಜೊತೆ ಮಾಹಿತಿ ಬಯಸಿದ ಶಾಸಕರು, ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಸತೀಶ್, ಇದು ಕೆ.ಹೆಚ್.ಎಸ್. ಆರ್.ಡಿ.ಪಿ. ಅವರ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಅದರ ಅಭಿಯಂತರರನ್ನೇ ಕೇಳಬೇಕಿದೆ. ಅವರಿಂದ ನಮಗೆ ಯಾವುದೇ ಮಾಹಿತಿ ಸಿಗುವುದಿಲ್ಲ ಎಂದರು. ಕೂಡಲೇ ಶಾಸಕರು ಕೆ.ಹೆಚ್.ಎಸ್. ಆರ್.ಡಿ.ಪಿ. ಅಭಿಯಂತರರರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು. ವೀರಾಜಪೇಟೆ ಠಾಣೆಯಲ್ಲಿ ಅಭಿಯಂತರರ ವಿರುದ್ಧ ದೂರು ನೀಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು. ಆಸ್ಪತ್ರೆಯ ಹೆರಿಗೆ ವಿಭಾಗ ದುಸ್ಥಿತಿಯಲ್ಲಿರುವ ಕಾರಣ ಮಳೆಗಾಲದಲ್ಲಿ ಸೋರಿಕೆ ಆಗುವುದರಿಂದ ಹೊಸ ಹೆರಿಗೆ ವಾರ್ಡ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಅನುಮತಿ ಕೋರಲಾಯಿತು. ಅಲ್ಲದೆ ಹೆರಿಗೆ ವಿಭಾಗ ಮತ್ತು ಶವಾಗಾರಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು ಇದನ್ನು ದುರಸ್ತಿಪಡಿಸಬೇಕಿದೆ. ಆಸ್ಪತ್ರೆಯ ಎಲ್ಲಾ ವಿದ್ಯುತ್ ಲೈನ್‌ಗಳು ತೀರಾ ಹಳೆಯದಾಗಿದ್ದು, ಪದೇ ಪದೇ ಹಾಳಾಗುತ್ತಿದ್ದು, ತುರ್ತಾಗಿ ಲೈನ್‌ಗಳನ್ನು ಬದಲಿಸುವ ಬಗ್ಗೆ ಕ್ರಮವಹಿಸಲು ಚೆಸ್ಕಾಂ ಅವರಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದರು. ಆಸ್ಪತ್ರೆಯಲ್ಲಿ ೧೩ ತಜ್ಞ ವೈದ್ಯರು, ೪ ಸಿ.ಎಂ.ಓ. ಹುದ್ದೆಗಳಿದ್ದು, ೫ ಹುದ್ದೆಗಳು ಭರ್ತಿಯಾಗಿ ಉಳಿದಂತೆ ೮ ಹುದ್ದೆಗಳು ಖಾಲಿಯಿವೆ. ತುರ್ತಾಗಿ ವೈದ್ಯರನ್ನು ನಿಯೋಜನೆ ಮಾಡಬೇಕು. ವೈದ್ಯರ ಸಂಖ್ಯೆಯ ಕೊರತೆಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ತೊಂದರೆಯಾಗುತ್ತಿದೆ ಎಂದು ಡಾ. ವಿಶ್ವನಾಥ್ ಸಿಂಪಿ ಹೇಳಿದರು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಂದ ಮಾಹಿತಿ ಬಯಸಿದ ಶಾಸಕರು ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಸರಿಯಾಗಿ ಇಲ್ಲ. ಎರಡು ಆ್ಯಂಬ್ಯುಲೆನ್ಸ್ ವಾಹನಗಳು ಅಪಘಾತಕ್ಕೀಡಾಗಿವೆ. ಇನ್ನೆರಡು ವಾಹನ ಕೆಟ್ಟು ನಿಂತಿವೆ. ಕೇವಲ ಒಂದು ವಾಹನ ಮಾತ್ರ ಓಡಾಡುತ್ತಿದೆ. ಆದಷ್ಟು ಬೇಗ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಮಂಡೇಟಿರ ಅನಿಲ್, ಸಂತೋಷ್, ಮಂಜು ಹಾಗೂ ಇತರರು ಸಭೆಗೆ ಮಾಹಿತಿ ನೀಡಿದರು. ಆಸ್ಪತ್ರೆ ಕ್ಯಾಂಟೀನ್ ಸಂಬAಧ ಟೆಂಡರ್ ಅವಧಿ ಮುಕ್ತಾಯವಾಗಿದ್ದರೂ, ಕ್ಯಾಂಟೀನ್ ಮಾಲೀಕರಿಗೆ ತೆರವು ಸಂಬAಧ ಸೂಚಿಸಿದ್ದರೂ ತೆರವುಗೊಳಿಸಿಲ್ಲ ಎಂದು ಮಂಡೇಟಿರ ಅನಿಲ್ ಸಭೆಗೆ ಮಾಹಿತಿ ನೀಡಿದರು. ಮರು ಟೆಂಡರ್ ಆದ ಬಳಿಕ ಕ್ಯಾಂಟೀನ್ ತೆರೆದರೆ ಸಾಕು, ಸಾಧ್ಯವಾದರೆ ಈಗ ಇರುವವರೇ ಮರು ಟೆಂಡರ್‌ನಲ್ಲಿ ಭಾಗವಹಿಸಲಿ ಎಂದ ಶಾಸಕರು ಕ್ಯಾಂಟೀನ್ ಮುಚ್ಚಿಸಲು ಸೂಚಿಸಿದರು. ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಶಬೀರ್, ಕಿಶೋರ್ ರಾಜ್, ಆಸ್ಪತ್ರೆಯ ವೈದ್ಯರುಗಳು, ಸೇರಿದಂತೆ ಇತರರು ಇದ್ದರು.