ಮಡಿಕೇರಿ, ಜೂ. ೨೦: ಪ್ರಖರ ಹಾಗೂ ಕಣ್ಣುಕುಕ್ಕುವ ಲೈಟ್‌ಗಳನ್ನು ಅಳವಡಿಸಿದ ವಾಹನ ಚಾಲಕರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ನೇತೃತ್ವದಲ್ಲಿ ಪೊಲೀಸರು ನಿಯಮ ಉಲ್ಲಂಘಿಸಿ ಪ್ರಖರವಾದ ಹೆಚ್ಚು ಬೆಳಕು ಹೊರಸೂಸುವ ಲೈಟ್‌ಗಳನ್ನು ಅಳವಡಿಸಿದ ವಾಹನಗಳನ್ನು ತಡೆದು ದಂಡ ವಿಧಿಸಿ ಲೈಟ್‌ಗಳ ತೆರವಿಗೆ ಸೂಚಿಸಿದರು.

ಈಗಾಗಲೇ ಹೆಚ್ಚು ಬೆಳಕು ಹೊರಹಾಕುವ ಎಲ್.ಇ.ಡಿ. ಬಲ್ಬ್ಗಳನ್ನು ವಾಹನಕ್ಕೆ ಅಳವಡಿಸದಂತೆ ಪೊಲೀಸ್ ಇಲಾಖೆ ಆದೇಶಿಸಿದ್ದು, ಇದರ ಭಾಗವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಈ ರೀತಿಯ ಬಲ್ಬ್ ಅಳವಡಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಳವಡಿಸಿದವರು ತೆರವುಗೊಳಿಸ ಬೇಕೆಂದು ಸಿಪಿಐ ಪಿ.ಕೆ. ರಾಜು ತಿಳಿಸಿದರು. ಈ ಸಂದರ್ಭ ನಗರ ಠಾಣೆ ಉಪನಿರೀಕ್ಷಕ ಲೋಕೇಶ್, ಸಂಚಾರಿ ಠಾಣೆ ಇನ್ಸ್ಪೆಕ್ಟರ್ ತಮ್ಮಯ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.