ವೀರಾಜಪೇಟೆ, ಜೂ. ೧೯: ವೀರಾಜಪೇಟೆ ಗಾಂಧಿನಗರದ ಕೃಷಿ ಇಲಾಖೆಯ ಮುಂಭಾಗ ಇಂದು ಬೆಳಿಗ್ಗೆ ತ್ರಿವೇಣಿ ಶಾಲೆಯ ವಾಹನ ಅಪಘಾತಕ್ಕೀಡಾಗಿದ್ದು, ೨೦ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ.

ತ್ರಿವೇಣಿ ಶಾಲೆಯ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರನ್ನು ೮೦ ಮೀಟರ್ ದೂರ ಎಳೆದುಕೊಂಡು ಹೋಗಿ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಟ್ರಾಕ್ಟರ್‌ಗೆ ಡಿಕ್ಕಿಯಾಗಿ ನಿಂತಿದೆ. ಟ್ರಾಕ್ಟರ್‌ಗೆ ಡಿಕ್ಕಿಯಾಗಿ ಬಸ್ಸು ನಿಂತಿದ್ದರಿAದ ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರಾದ ಪ್ರತ್ಯಕ್ಷದರ್ಶಿ ಮಂಜುನಾಥ್ ಮಾಹಿತಿ ನೀಡಿದರು.

ಕಾರಿನಲ್ಲಿದ್ದ ರಶೀದ್ ಎಂಬುವವರು ಮಕ್ಕಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಅವರಿಗೂ ಮತ್ತು ಅವರ ಮಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೆ ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಈ ಅಪಘಾತದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕನಿಗೆ ದಿಢೀರ್ ಉಂಟಾದ ಅನಾರೋಗ್ಯದಿಂದ ಅವರನ್ನು ಕೂಡ ತಕ್ಷಣ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯನ್ನು ವೀರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಯಿತು.