ಸೋಮವಾರಪೇಟೆ, ಜೂ. ೧೯: ತಾಲೂಕಿನ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಲಗ್ಗೆಯಿಟ್ಟು ಫಸಲು ನಷ್ಟಗೊಳಿಸುತ್ತಿವೆ.

ಕಳೆದ ಮೂರು ದಿನಗಳಿಂದ ಎರಡು ಕಾಡಾನೆಗಳು ಗ್ರಾಮಕ್ಕೆ ಆಗಮಿಸುತ್ತಿದ್ದು, ಕೃಷಿ ಪ್ರದೇಶದಲ್ಲಿ ಮನಸೋಯಿಚ್ಛೆ ದಾಂದಲೆ ನಡೆಸಿ, ಫಸಲು ನಷ್ಟಗೊಳಿಸುತ್ತಿವೆ. ಯಡವನಾಡಿನ ಶರತ್ ದೇವೇಂದ್ರ ಅವರಿಗೆ ಸೇರಿದ ಬಾಳೆ, ಅಡಿಕೆ, ತೆಂಗನ್ನು ತಿಂದು ನಾಶಗೊಳಿಸಿದ್ದು, ಶುಂಠಿಯನ್ನು ತುಳಿದು ನಷ್ಟಗೊಳಿಸಿವೆ. ೫೦೦ಕ್ಕೂ ಅಧಿಕ ಬಾಳೆಯನ್ನು ಹಾನಿಮಾಡಿವೆ.

ಸುಮಾರು ೨ ಏಕರೆ ಪ್ರದೇಶದಲ್ಲಿ ಬೆಳೆದಿದ್ದ ಫಸಲು ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಇದರೊಂದಿಗೆ ಕಾಡಾನೆಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ದೇವೇಂದ್ರ ಆಗ್ರಹಿಸಿದ್ದಾರೆ.

ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.