(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜೂ. ೧೯: ತನ್ನ ಸಹೋದರಿಯ ಹುಟ್ಟುಹಬ್ಬ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಹೋದರಿಗೆ ಶುಭಾಶಯ ಕೋರಿ ಗೋಣಿಕೊಪ್ಪಲುವಿನ ವಾಸದ ಮನೆಗೆ ತನ್ನ ಸ್ಕೂಟಿಯಲ್ಲಿ ರಾತ್ರಿ ೮.೪೫ರ ಸುಮಾರಿಗೆ ಪೊನ್ನಂಪೇಟೆಯಿAದ ಗೋಣಿಕೊಪ್ಪ ಕಡೆಗೆ ಬರುತ್ತಿದ್ದ ವೇಳೆ ಅರುವತ್ತೋಕ್ಲು ಬಳಿ ಎದುರುಗಡೆಯಿಂದ ಬಂದ ಬೊಲೆರೊ ಪಿಕ್‌ಅಪ್ ಜೀಪ್ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿಯಲ್ಲಿದ್ದ ಪ್ರಭಾವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ ಕುಳಿತಿದ್ದ ಯುವತಿ ತ್ರೀಷ್ಣ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಜೀಪ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಹಿಟ್ ಅಂಡ್ ರನ್ ಮಾಡುವ ಮೂಲಕ ಅಮಾಯಕ ಎರಡು ಜೀವಗಳನ್ನು ಬಲಿ ತೆಗೆದುಕೊಂಡ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮ ಪಂಚಾಯಿತಿಯ ಕಚೇರಿಯ ಅನತಿ ದೂರದಲ್ಲಿ ನಡೆದಿದೆ. ಜೀಪ್ ಚಾಲಕನನ್ನು ಗೋಣಿಕೊಪ್ಪ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟುವ ಮೂಲಕ, ಶ್ರೀಮಂಗಲ ಬಳಿಯ ಕಾಕೂರು ಎಂಬಲ್ಲಿ ವಾಹನ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ವಾರದ ಹಿಂದೆ ಗೋಣಿಕೊಪ್ಪ-ಹಾತೂರು ಮುಖ್ಯರಸ್ತೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಮಾಯಕ ಪಾದಚಾರಿಯನ್ನು ಸರ್ಕಾರಿ ಬಸ್ ಬಲಿ ತೆಗೆದುಕೊಂಡಿದ್ದ ಪ್ರಕರಣ ಮಾಸುವ ಮುನ್ನವೇ ಗೋಣಿಕೊಪ್ಪ- ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ.

(ಮೊದಲ ಪುಟದಿಂದ) ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪ ಕಡೆಗೆ ತನ್ನ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆ ಹಾಗೂ ಯುವತಿಯ ಮೇಲೆ ಗೋಣಿಕೊಪ್ಪ ಕಡೆಯಿಂದ ಪೊನ್ನಂಪೇಟೆ ಕಡೆಗೆ ತೆರಳುತ್ತಿದ್ದ ಬೊಲೆರೊ ಜೀಪ್ ಡಿಕ್ಕಿಪಡಿಸಿ, ಸ್ಕೂಟಿ ಚಾಲನೆ ಮಾಡುತ್ತಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ, ಮೂಲತಃ ಬಿ. ಶೆಟ್ಟಿಗೇರಿಯ ನಿವಾಸಿ ಚೇಂದಿರ ಪ್ರಭಾವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ಗೋಣಿಕೊಪ್ಪ ಸಂತ ಥೋಮಸ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ತ್ರೀಷ್ಣ ಎಂಬಾಕೆ ಗಂಭೀರ ಗಾಯಗೊಂಡಿದ್ದು, ಈಕೆಯನ್ನು ರಾತ್ರಿಯೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಮೃತಪಟ್ಟಿದ್ದಾಳೆ.

ಬೊಲೆರೊ ಚಾಲನೆ ಮಾಡುತ್ತಿದ್ದ ಅಸ್ಸಾಂ ಮೂಲದ ಕಮಲ್‌ಸಿಂಗ್ ಕುಟ್ಟ ಭಾಗದ ಕಾಫಿ ತೋಟದಲ್ಲಿ ಚಾಲಕನಾಗಿ ಕಳೆದ ೮ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಗೋಣಿಕೊಪ್ಪ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸುವ ಮೂಲಕ ಡಿಕ್ಕಿಪಡಿಸಿದ ವಾಹನ ಹಾಗೂ ಚಾಲಕನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ರಾತ್ರಿ ೮.೪೫ರ ಸುಮಾರಿಗೆ ಜೀಪ್ ಚಾಲಕ ಕಮಲ್ ಸಿಂಗ್ ಗೋಣಿಕೊಪ್ಪದಿಂದ ಕುಟ್ಟ ಭಾಗಕ್ಕೆ ತನ್ನ ಜೀಪಿನಲ್ಲಿ ತೆರಳುತ್ತಿದ್ದ, ಇದೇ ಸಮಯಕ್ಕೆ ಪ್ರಭಾವತಿ ಹಾಗೂ ವಿದ್ಯಾರ್ಥಿನಿ ತ್ರೀಷ್ಣ ಪೊನ್ನಂಪೇಟೆಯ ಪ್ರಭಾವತಿಯ ಸಹೋದರಿ ಮನೆಯಿಂದ ಹೊರಟು ಅರುವತ್ತೋಕ್ಲು ಬಳಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಬೊಲೆರೊ ಡಿಕ್ಕಿಪಡಿಸಿ ವಾಹನವನ್ನು ನಿಲ್ಲಿಸದೆ ತೆರಳಿದ್ದಾನೆ. ಮೃತ ಮಹಿಳೆ ಪತಿ ಹಾಗೂ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತಪಟ್ಟ ಯುವತಿ ತ್ರೀಷ್ಣ ತನ್ನ ತಾಯಿಯನ್ನು ಅಗಲಿದ್ದಾಳೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಮಡಿಕೇರಿಯಿಂದ ಆಗಮಿಸಿದ ವೈಜ್ಞಾನಿಕ ನೆರವು ಘಟಕದ ಪೊಲೀಸರು ವಾಹನದ ಮಹಜರು ನಡೆಸಿದರು.

ಪೊಲೀಸ್ ಛೇಸಿಂಗ್.!

ಮುಖ್ಯ ರಸ್ತೆಯಲ್ಲಿ ಅಪಘಾತ ಪ್ರಕರಣ ತಿಳಿಯುತ್ತಿದ್ದಂತೆಯೇ ಗೋಣಿಕೊಪ್ಪ ಸಬ್ ಇನ್ಸ್ಪೆಕ್ಟರ್ ರೂಪಾದೇವಿ ಬೀರಾದಾರ್ ಕೂಡಲೇ ಪೊನ್ನಂಪೇಟೆ, ಶ್ರೀಮಂಗಲ ಭಾಗದ ಪೊಲೀಸರಿಗೆ ಮಾಹಿತಿ ನೀಡಿ ಅಪಘಾತ ಪಡಿಸಿದ ವಾಹನವನ್ನು ತಡೆಯುವಂತೆ ತಮ್ಮ ವಾಕಿಟಾಕಿ ಮೂಲಕ ಸಂದೇಶ ರವಾನಿಸಿದ್ದರು. ಗೋಣಿಕೊಪ್ಪ ಕ್ರೆöÊಮ್ ಸಿಬ್ಬಂದಿಗಳಾದ ಚಂದ್ರಶೇಖರ್ ಹಾಗೂ ತೇಜಸ್ ಕುಮಾರ್ ತಮ್ಮ ವಾಹನದಲ್ಲಿ ಜೀಪಿನ ಹಿಂದೆಯೆ ತೆರಳಿದರು. ಅಷ್ಟೋತ್ತಿಗಾಗಲೇ ಜೀಪ್ ಚಾಲಕ ಅತಿ ವೇಗದಿಂದ ಪೊನ್ನಂಪೇಟೆ ದಾಟಿ ಶ್ರೀಮಂಗಲ ಬಳಿ ತೆರಳುತ್ತಿದ್ದ. ಬೀಟ್‌ನಲ್ಲಿದ್ದ ಶ್ರೀಮಂಗಲ ಪೊಲೀಸರು ಜೀಪನ್ನು ತಡೆಯುವ ಪ್ರಯತ್ನ ನಡೆಸಿದರಾದರೂ ಜೀಪ್ ನಿಲ್ಲಿಸದೆ ಮುಂದೆ ಸಾಗಿತು. ಶ್ರೀಮಂಗಲ ಪೊಲೀಸರು ಎಚ್ಚೆತ್ತುಕೊಂಡು ಕಾಕೂರು ಬಳಿಯ ಸಾರ್ವಜನಿಕರಿಗೆ ಈ ಮಾಹಿತಿಯನ್ನು ರವಾನಿಸುತ್ತಿದ್ದಂತೆಯೆ ಆ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯಲ್ಲಿ ಜಮಾಯಿಸಿದರು.

ವಾಹನವು ಬರುತ್ತಿದ್ದಂತೆಯೇ ಸಾರ್ವಜನಿಕರು ಅಡ್ಡಕಟ್ಟಿದ್ದರು. ಗಾಬರಿಯಲ್ಲಿದ್ಧ ಜೀಪ್ ಚಾಲಕ ಕಮಲ್ ಸಿಂಗ್ ಏಕಾಏಕಿ ಜೀಪನ್ನು ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿ ವಾಹನ ನಿಲುಗಡೆ ಮಾಡಿದ್ದಾನೆ. ಅಷ್ಟೊತ್ತಿಗಾಗಲೇ ಹಿಂಬದಿಯಿAದ ತೆರಳುತ್ತಿದ್ದ ಗೋಣಿಕೊಪ್ಪ ಕ್ರೆöÊಮ್ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ.