ಶನಿವಾರಸಂತೆ, ಜೂ. ೧೮: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಚೆನ್ನಾಗಿ ಮಳೆ ಸುರಿಯುತ್ತಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ವರ್ಷಾರಂಭದಿAದ ಇಲ್ಲಿಯವರೆಗೆ ೧೬ ಇಂಚು ಮಳೆಯಾಗಿದೆ. ತಾ. ೭ ರಿಂದ ಮೃಗಶಿರ ಮಳೆ ಆಗಾಗ್ಗೆ ಬಿಡುವು ನೀಡುತ್ತಾ ಹದವಾಗಿ ಸುರಿಯುತ್ತಿದ್ದು, ರೈತರು ಗದ್ದೆಯಲ್ಲಿ ಭತ್ತದ ವ್ಯವಸಾಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಗದ್ದೆಗಳ ಬದುವು ಕಡಿಯುತ್ತಾ ಅಗೆ ಹಾಕುವ ಮುಹೂರ್ತಕ್ಕೆ ಕಾಯುತ್ತಿದ್ದಾರೆ. ಆದರೆ, ರೈತ ಸಂಪರ್ಕ ಕೇಂದ್ರದಲ್ಲಿ ಇನ್ನೂ ಭತ್ತದ ಬಿತ್ತನೆ ಬೀಜ ಬಂದಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆಯಿಂದ ಕಾಜೂರು ಹೊಳೆ ತುಂಬಿ ಹರಿಯುತ್ತಿದ್ದು, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೆಲವು ರೈತರು ಅಗೆ ಹಾಕಲು ಗದ್ದೆಯ ಬದು ಕಡಿದು ಸಿದ್ಧತೆ ಮಾಡಿಕೊಂಡು ಬಿತ್ತನೆಗೆ ಹೈಬ್ರೀಡ್ ಬೀಜದ ನಿರೀಕ್ಷೆಯಲ್ಲಿದ್ದಾರೆ. ತಾ. ೧೫ ರೊಳಗೆ ಅಗೆ ಹಾಕಬೇಕು. ಒಂದು ತಿಂಗಳಿಗೆ ಸರಿಯಾಗಿ ನಾಟಿ ಮಾಡಬೇಕು. ಇದು ನಾಲ್ಕು ತಿಂಗಳ ಬೆಳೆಯಾಗಿರುವುದರಿಂದ ತಡವಾಗಿ ಹಾಕಿದರೇ ಸಸಿಮಡಿ ಶೀತಕ್ಕೆ ಕರಗಿ ಹೋಗುತ್ತದೆ ಎಂದು ಕಾಜೂರು ಗ್ರಾಮದ ಚಂದ್ರಣ್ಣ, ಶಿಡಿಗಳಲೆ ಗ್ರಾಮದ ಉಮಾಶಂಕರ್ ಮತ್ತಿತರ ರೈತರು ಅಳಲು ತೋಡಿಕೊಂಡರು. ಚಿಕ್ಕಕೊಳತ್ತೂರು ಗ್ರಾಮದಲ್ಲಿ ಭತ್ತದ ಹಳೇ ಬೀಜ ಇಟ್ಟುಕೊಂಡಿದ್ದ ರೈತರು ಗದ್ದೆಯಲ್ಲಿ ಬಿತ್ತನೆ ಮಾಡಿ ಅಗೆ ಹಾಕಿದ್ದಾರೆ. ಇದು ೬ ತಿಂಗಳ ಬೆಳೆಯಾಗಿದ್ದು, ತಿಂಗಳ ನಂತರ ನಾಟಿ ಮಾಡುವುದಾಗಿ ತಿಳಿಸಿದರು. ಶುಂಠಿಯ ಬೆಲೆ ಗಗನಕ್ಕೆರಿದ್ದು, ರೈತರ ಒಲವು ಶುಂಠಿ ಬೆಳೆಯತ್ತ ಹರಿದು ಬಹುತೇಕ ರೈತರು ಶುಂಠಿ ಬೆಳೆದಿದ್ದಾರೆ. ಸಂತೆ ಮಾರುಕಟ್ಟೆಯಲ್ಲಿ ೧ ಕೆ.ಜಿ. ಶುಂಠಿಗೆ ರೂ. ೯೦-೧೦೦ ದರವಿದ್ದರೇ ತರಕಾರಿ ಅಂಗಡಿಯಲ್ಲಿ ೧ ಕೆ.ಜಿ. ಶುಂಠಿಗೆ ರೂ. ೧೫೦-೨೦೦ ದರವಿದೆ. ಹಾಗಾಗಿ, ಭತ್ತ ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.