ಕೂಡಿಗೆ, ಜೂ. ೧೮: ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮಗಳ ರೈತರ ಜಮೀನಿನ ದಾಖಲೆಯ ಪಹಣಿ(ಆರ್.ಟಿ.ಸಿ.)ಯಲ್ಲಿ ಬೆಳೆದಿರುವ ಬೆಳೆಯ ವಿವರಗಳನ್ನು ಕಂದಾಯ ಇಲಾಖೆ, ಕೃಷಿ ಇಲಾಖೆ ನೋಂದಣಿ ಮಾಡದ ಹಿನ್ನೆಲೆ ರೈತರು ದಿನಂಪ್ರತಿ ಕಂದಾಯ ಇಲಾಖೆ ಮತ್ತು ಸಹಕಾರ ಸಂಘಕ್ಕೆ ಅಲೆಯುವ ಪ್ರಸಂಗ ಎದುರಾಗಿದೆ.

ಸ್ಥಳೀಯ ಸಹಕಾರ ಸಂಘಗಳ ಮುಖೇನ ಬಡ್ಡಿ ರಹಿತ ಸಾಲವನ್ನು ಪಡೆಯಲು ರೈತರಿಗೆ ಜಮೀನಿನ ಪಹಣಿ ಬಹು ಮುಖ್ಯವಾಗಿರುತ್ತದೆ. ಆದರೆ ಕೆಲ ರೈತರ ದಾಖಲೆಗಳು ನೋಂದಣಿ ಅದರೂ ಅದರಲ್ಲಿ ಕ್ರಮಬದ್ಧವಾಗಿ ಬೆಳೆಯ ವಿವರಗಳು ನೋಂದಾವಣಿಗೊಳ್ಳದ ಕಾರಣ ಸಾಲ ಪಡೆಯಲಾಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆಯಲ್ಲಿ ಪಹಣಿ ನೋಂದಣಿಗೆ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಇಂತಹ ಪರಿಸ್ಥಿತಿ ಎದುರಾಗಿರುವುದರಿಂದಾಗಿ ಈ ವ್ಯಾಪ್ತಿಯ ರೈತರು ಕಂದಾಯ ಇಲಾಖೆಗೆ ಕೃಷಿ ಜಮೀನಿನ ಬೆಳೆಯ ವಿವರಗಳನ್ನು ನಮೂದಿಸಲು ಅಲೆದಾಡುವಂತಹ ಪ್ರಸಂಗ ಎದುರಾಗಿದೆ. ಇದನ್ನು ಸರಿಪಡಿಸುವಂತೆ ತಾಲೂಕು ವ್ಯಾಪ್ತಿಯ ರೈತರಾದ ಗಣೇಶ್, ಶಿವಣ್ಣ, ಕೃಷ್ಣ, ದಿನೇಶ್, ಲಕ್ಷ್ಮಮ್ಮ ಸೇರಿದಂತೆ ಹಲವು ರೈತರು ಒತ್ತಾಯಿಸಿದ್ದಾರೆ.

ಸೆಪ್ಟೆಂಬರ್ ತಿಂಗಳುಗಳಲ್ಲಿ ರೈತರು ಬೆಳೆದ ಬೆಳೆಯ ಸಮೀಕ್ಷೆಯನ್ನು ಸಂಬAಧಿಸಿದ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಮಾಡುವುದರಿಂದ ಮುಂದಿನ ದಿನಗಳಲ್ಲಿ ನೋಂದಣಿ ಮಾಡುವ ಜೊತೆಗೆ ಕೃಷಿ ಇಲಾಖೆ ಮೂಲಕ ನೋಂದಣಿ ಮಾಡುವ ಎಫ್.ಐ.ಡಿ. ನಂಬರ್ ನೋಂದಣಿ ಸಂದರ್ಭದಲ್ಲಿ ಜಂಟಿ ಖಾತೆಯಲ್ಲಿರುವ ರೈತರಿಗೆ ಅವರ ಜಮೀನಿನ ದಾಖಲೆಯ ಅನುಗುಣವಾಗಿ ಎಫ್.ಐ.ಡಿ. ನಂಬರ್ ನೋಂದಣಿ ಮಾಡಿ ರೈತರು ಕೃಷಿ ಸಾಲವನ್ನು ಪಡೆಯಲು ಸಹಕಾರ ನೀಡುವಂತೆ ಈ ವ್ಯಾಪ್ತಿಯ ನೂರಾರು ರೈತರ ಅಭಿಪ್ರಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.