ಮಡಿಕೇರಿ, ಜೂ. ೧೮: ೨೦೨೨ರ ಅಕ್ಟೋಬರ್ ೧೫ ರ ಬಳಿಕ ಕೊಡವ ಅಕಾಡೆಮಿಯ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಹಿಂದೆ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧಿಕಾರಾವಧಿ ಕಳೆದ ೨೦೨೨ರ ಅಕ್ಟೋಬರ್ ೧೫ಕ್ಕೆ ಕೊನೆಗೊಂಡಿತ್ತು. ಆದರೆ ನಂತರದಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಹೊಸ ಸರಕಾರ ರಚನೆಯಾಗುವ ತನಕ ಅಧಿಕಾರ ಪೂರ್ಣಗೊಂಡ ರಾಜ್ಯದ ಬಹುತೇಕ ಅಕಾಡೆಮಿಗಳಿಗೆ ನೇಮಕಾತಿ ಪ್ರಕ್ರಿಯೆಗೆ ಆಗಿನ ಸರಕಾರವಾಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ ಮುಂದಾಗಿರಲಿಲ್ಲ.

ತದನAತರದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡು ರಾಜ್ಯದಲ್ಲಿ ಹೊಸ ಸರಕಾರವೂ ರಚನೆಗೊಂಡಿತಾದರೂ ಸುಮಾರು ಹತ್ತು ತಿಂಗಳು ಕಾಲ ಅಕಾಡೆಮಿಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ. ಇದೀಗ ಲೋಕಸಭಾ ಚುನಾವಣೆ ಘೋಷಣೆಗೆ ಒಂದೆರಡು ದಿನ ಮುನ್ನ ಅಂದರೆ ಮಾರ್ಚ್ ೧೫ ರಂದು ರಾಜ್ಯ ಸರಕಾರ ರಾಜ್ಯದ ವಿವಿಧ ಭಾಷಾ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿತ್ತು. ಈ ಘೋಷಣೆ ಬಳಿಕ ಲೋಕಸಭಾ ಚುನಾವಣೆಗೆ ದಿನವೂ ನಿಗದಿಗೊಂಡು ಮಾರ್ಚ್ ಮೂರನೇ ವಾರದಿಂದಲೂ ನೀತಿ ಸಂಹಿತೆಯೂ ಎದುರಾದ ಕಾರಣದಿಂದಾಗಿ ಮತ್ತೆ ಯಾವುದೇ ಚಟುವಟಿಕೆಗಳಿಗೆ ಆಸ್ಪದವಾಗಲಿಲ್ಲ.

ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಕೊಡವ ಅಕಾಡೆಮಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಯನ್ನೂ ಒಳಗೊಂಡಿರುವ ಅರೆಭಾಷೆ ಅಕಾಡೆಮಿಗಳು ಬರುತ್ತವೆ. ಇಲ್ಲಿ ಎರಡೂ ಅಕಾಡೆಮಿಗಳಿಗೆ ಮಾರ್ಚ್ ೧೫ ರಂದು ಅಧ್ಯಕ್ಷರುಗಳ ನೇಮಕಾತಿ ಪ್ರಕಟವಾಗಿದೆ. ಕೊಡವ ಅಕಾಡೆಮಿ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಾಜಿ ನಿಯೋಜಿತರಾಗಿದ್ದಾರೆ. ಇಲ್ಲಿ ಮತ್ತೊಂದು ಗಮನಾರ್ಹ ವಿಚಾರವೆಂದರೆ ಕೊಡವ ಅಕಾಡೆಮಿಗೆ ಕೇವಲ ಅಧ್ಯಕ್ಷರ ನೇಮಕಾತಿ ಮಾತ್ರವಾಗಿದ್ದು, ಯಾವುದೇ ಸದಸ್ಯರ ಆಯ್ಕೆಯಾಗಿಲ್ಲ. ಅರೆಭಾಷೆ ಅಕಾಡೆಮಿಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಸದಸ್ಯರ ನೇಮಕಾತಿಯಾಗಿದ್ದು, ಕೊಡಗು ಜಿಲ್ಲೆಯಿಂದ ಯಾರನ್ನೂ ನೇಮಕ ಮಾಡಲಾಗಿಲ್ಲ. ಕೊಡಗಿನಿಂದ ಸದಸ್ಯರ ನೇಮಕವಾಗಲಿದ್ದಾರೆ ಎನ್ನಲಾಗಿದ್ದರೂ ಇವರ ಆಯ್ಕೆಯನ್ನು ಪ್ರಕಟಿಸಲಾಗಿಲ್ಲ. ಇದೀಗ ಎರಡೂ ಅಕಾಡೆಮಿಗಳ ಅಧ್ಯಕ್ಷರುಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಅರೆಭಾಷೆ ಅಕಾಡೆಮಿಗೆ ಸದ್ಯದ ಮಟ್ಟಿಗೆ ದಕ್ಷಿಣಕನ್ನಡ ಜಿಲ್ಲೆಯಿಂದ ೬ ಸದಸ್ಯರು ನೇಮಕವಾಗಿರುವುದರಿಂದ ಈ ಅಧ್ಯಕ್ಷರಿಗೆ ಒಂದಷ್ಟು ಕೆಲಸ ಕಾರ್ಯಗಳಿಗೆ ಮುಂದಡಿಯಿಡಲು ಅವಕಾಶವಿದೆ. ಆದರೆ ಕೊಡವ ಅಕಾಡೆಮಿಗೆ ಇನ್ನೂ ಯಾವುದೇ ಸದಸ್ಯರ ಆಯ್ಕೆಯನ್ನು ಸರಕಾರ ಪ್ರಕಟಿಸದಿರುವುದರಿಂದ ಕೊಡವ ಅಕಾಡೆಮಿ ಅಧ್ಯಕ್ಷರು ಇದಕ್ಕಾಗಿ ಕಾಯುವುದು ಅನಿವಾರ್ಯವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಸದಸ್ಯರ ಹೆಸರು ಪ್ರಕಟವಾಗಲಿದೆ ಎಂಬ ಮಾತು ಕೇಳಿಬಂದಿದ್ದರೂ ಖಚಿತತೆ ಇಲ್ಲ.

‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ಸದಸ್ಯರ ನೇಮಕಾತಿ ಸರಕಾರದ ಮೂಲಕ ಆಗಬೇಕಿದ್ದು, ಸದ್ಯದಲ್ಲಿ ಘೋಷಣೆಯಾಗುವ ವಿಶ್ವಾಸ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಕಾಡೆಮಿ ಕಾರ್ಯಚಟುವಟಿಕೆಗೆ ಸಂಬAಧಿಸಿದAತೆ ಹಲವಾರು ಉತ್ತಮ ಚಿಂತನೆಗಳು, ಅಭಿಲಾಷೆಗಳಿವೆ. ಭಾಷೆಯ ಮೂಲ ಸ್ವರೂಪಕ್ಕೆ ಒತ್ತು ನೀಡುವುದು, ಸಂಸ್ಕೃತಿ, ಆಚಾರ - ವಿಚಾರಗಳಿಗೆ ಆದ್ಯತೆ ನೀಡುವುದು ತಮ್ಮ ಉದ್ದೇಶವಾಗಿದ್ದು, ಸದಸ್ಯರ ನೇಮಕಾತಿ ಬಳಿಕ ಕ್ರಿಯಾಯೋಜನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.