ಅನಿಲ್ ಎಚ್.ಟಿ.

ಮಡಿಕೇರಿ, ಜ. ೧೭: ಮಡಿಕೇರಿ ಮಗಳು ಎಂಬ ಹಿರಿಮೆ ಹೊಂದಿದ್ದ ಪಲ್ಲವಿ ಈಗ ಡಾಕ್ಟರ್ ಪಲ್ಲವಿಯಾಗಿದ್ದಾಳೆ, ಹೌದು, ಡಾಕ್ಟರೇಟ್ ಪಡೆದಿರುವ ಪಲ್ಲವಿ ಮಡಿಕೇರಿ ಜನತೆಯ ಪಾಲಿಗೆ ಹೆಮ್ಮೆ ತರುವಂಥ ಸಾಧನೆ ತೋರಿದ್ದಾಳೆ.

ಯಾರೀ ಪಲ್ಲವಿ ಎಂದು ಕೇಳಿದಿರಾ? ೨೦೦೬ ರಲ್ಲಿ ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಸಂಭವಿಸಿದ ಭೂಕುಸಿತ ಘಟನೆ ನೆನಪಿಸಿಕೊಳ್ಳಿ, ಆ ಭೂಕುಸಿತದಲ್ಲಿ ಎರಡು ಕುಟುಂಬಗಳಿಗೆ ಸೇರಿದ ೬ ಮಂದಿ ಭೂ ಸಮಾಧಿಯಾಗಿದ್ದರಲ್ಲ, ಈ ಭೀಕರ ಭೂಕುಸಿತದಲ್ಲಿ ತಾನು ನಿದ್ರಿಸುತ್ತಿದ್ದ ಸಂದರ್ಭ ಕುಸಿದ ಬರೆಯಡಿ ಸಿಲುಕಿ, ತನ್ನ ತಾಯಿ, ತಂಗಿ, ತಮ್ಮನನ್ನು ಕಳೆದುಕೊಂಡರೂ ತಾನೋರ್ವಳು ಮಾತ್ರ ಜೀವಂತವಾಗಿ ಉಳಿದಿದ್ದಳಲ್ಲ, ಅದೇ ಪಲ್ಲವಿ ಈಗ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾ. ಅನುಸೂಯ ರೈ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಪಡೆದು ಡಾ. ಪಲ್ಲವಿ ಎನಿಸಿಕೊಂಡಿದ್ದಾರೆ. ಮನದಲ್ಲಿ ಎಷ್ಟೇ ನೋವಿರಲಿ, ಛಲ ಎಂಬುದಿದ್ದರೆ ಖಂಡಿತಾ ಜೀವನದಲ್ಲಿ ಸಾಧನೆ ಸಾಧ್ಯ ಎಂಬುದನ್ನೂ ಪಲ್ಲವಿ ನಿರೂಪಿಸಿದ್ದಾರೆ.

೨೦೦೬ ರಲ್ಲಿ ಮಹಾಮಳೆಯ ಸಂದರ್ಭ ಸಂಭವಿಸಿದ ಭೂಕುಸಿತದಲ್ಲಿ ಮಂಗಳಾದೇವಿ ನಗರದಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಕುಟುಂಬದ ಪಲ್ಲವಿಯ ತಾಯಿ, ತಂಗಿ, ತಮ್ಮ ಮಣ್ಣು ಪಾಲಾಗಿದ್ದರು, ಇದೇ ಭೂಕುಸಿತದಲ್ಲಿ ಮತ್ತೆ ಮೂವರು ಕಾರ್ಮಿಕರೂ ಸಾವನ್ನಪ್ಪಿದ್ದರು. ೬ ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಈ ಭೂಕುಸಿತ ಕೊಡಗಿನ ಇತಿಹಾಸದಲ್ಲಿಯೇ ಮೊದಲ ಪ್ರಾಕೃತಿಕ ವಿಕೋಪ ಎನಿಸಿಕೊಂಡಿತ್ತು. ತಾಯಿ, ತಂಗಿ, ತಮ್ಮನೊಂದಿಗೆ ನಿದ್ರಿಸುತ್ತಿದ್ದ ಪಲ್ಲವಿ ಅದೃಷ್ಟವಶಾತ್ ಕುಸಿಯುತ್ತಿದ್ದ ಮಣ್ಣಿನಲ್ಲಿಯೇ ಜಾರಿ ಕೆಳಕ್ಕೆ ಬಂದು ಬಿದ್ದಿದ್ದಳು. ಆಗ ಆಕೆಗೆ ೧೬ ವರ್ಷ.

ಭೂಕುಸಿತದಲ್ಲಿ ಸಾವನ್ನಪ್ಪಿದ ಪಲ್ಲವಿಯ ಕುಟುಂಬವೂ ಸೇರಿದಂತೆ ಇತರರ ಸದಸ್ಯರಿಗೆ ಅಂದಿನ ಜಿಲ್ಲಾಧಿಕಾರಿ ಸುಭೋದ್ ಯಾದವ್ ಪ್ರಯತ್ನದಿಂದ ಸರ್ಕಾರದ ಮೂಲಕ ೩ ಲಕ್ಷ ರೂಪಾಯಿ ಪರಿಹಾರ ದೊರಕಿತ್ತು. ಅದನ್ನು ಪಲ್ಲವಿ ಹೆಸರಿನಲ್ಲಿಯೇ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿತ್ತು. ಅದೇ ಹಣ ಪಲ್ಲವಿಯ ಭವಿಷ್ಯದ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗಿತ್ತು.

ಭೂಕುಸಿತದಲ್ಲಿ ಬದುಕಿ ಉಳಿದ ಪಲ್ಲವಿ ಪಾಲಿಗೆ ಮಡಿಕೇರಿಯ ಸಮಾಜಸೇವಕ ಕೆ.ಟಿ. ಬೇಬಿ ಮ್ಯಾಥ್ಯು ಪಾಲಕರಾದರು. ಆಕೆಯ ಪಾಲಿಗೆ ಮಾರ್ಗದರ್ಶಕರಾದರು, ಪಲ್ಲವಿಯ ದೊಡ್ಡಪ್ಪ ಸುಂದರ ಎಂಬುವವರ ಮನೆಯಲ್ಲಿ ಮೂರ್ನಾಡಿನಲ್ಲಿ ಪಲ್ಲವಿ ವಾಸವಾಗಿದ್ದು, ಮೂರ್ನಾಡಿನ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದ್ದಳು. ನಂತರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಪಲ್ಲವಿ ಈ ಹಂತಗಳಲ್ಲಿಯೂ ಅತ್ಯುತ್ತಮ ಅಂಕಗಳಿಸಿದ್ದಳು.

ಮAಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆದ ನಂತರ ಬೆಂಗಳೂರಿನ ಜೈನ್ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರಿದ ಪಲ್ಲವಿ ಕೆಲ ವರ್ಷಗಳಿಂದ ಆ ಕಾಲೇಜಿನ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ, ತನ್ನ ಮನಸ್ಸು ಎಷ್ಟೇ ನೊಂದಿರಲಿ, ತಾಯಿ, ತಮ್ಮ, ತಂಗಿಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದರೂ, ಶಿಕ್ಷಣದ ಬಗೆಗಿನ ಒಲವು ಮಾತ್ರ ಪಲ್ಲವಿಯಲ್ಲಿ ನಶಿಸಿರಲಿಲ್ಲ, ಹೀಗಾಗಿಯೇ ಪಿಎಚ್ ಡಿ ಪಡೆಯಬೇಕೆಂಬ ಛಲದಿಂದ ಭಾರತೀಯ ದೃಷ್ಟಿಕೋನದಿಂದ ಬ್ಯಾಂಕಿAಗ್ ಇನ್ಸುರೆನ್ಸ್, ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಿದರು. ಇದೀಗ ಈ ವಿಷಯಕ್ಕಾಗಿ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ.

ಇದೀಗ ಪಲ್ಲವಿಗೆ ಡಾಕ್ಟರೇಟ್ ದೊರಕಿದ್ದು, ಪಲ್ಲವಿ ಈಗ ಡಾ. ಪಲ್ಲವಿಯಾಗಿದ್ದಾರೆ. ಮಡಿಕೇರಿ ಜನತೆಯ ಆತ್ಮೀಯತೆ, ತನ್ನ ಸಂಕಷ್ಟ ಕಾಲದಲ್ಲಿ ಮಡಿಕೇರಿಯ ಜನರು ನೀಡಿದ ನೆರವನ್ನು ಎಂದೆAದಿಗೂ ಮರೆಯಲಾರೆ, ಅವರು ಸಹಕಾರ, ಜೀವನೋತ್ಸಾಹದ ಮಾರ್ಗದರ್ಶನ ನೀಡದೇ ಹೋಗಿದ್ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನಗೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಪಲ್ಲವಿ ಹೆಮ್ಮೆಯಿಂದ ತನ್ನ ಸಾಧನೆಯನ್ನು ಮಡಿಕೇರಿಯ ಜನತೆಗೆ ಸಮರ್ಪಿಸಿದರು. ನನ್ನ ಅಮ್ಮ ತನ್ನ ಮಕ್ಕಳು ಉತ್ತಮ ವಿದ್ಯೆ ಪಡೆಯಬೇಕೆಂದು ಬಯಸಿದ್ದರು. ಇದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಿದ್ದರು. ಆದರೆ ಭೂಕುಸಿತದಿಂದಾಗಿ ಅಮ್ಮನೊಂದಿಗೆ ಆಕೆಯ ಇಬ್ಬರು ಮಕ್ಕಳೂ ಇನ್ನಿಲ್ಲವಾದರು, ಜೀವಂತ ಉಳಿದ ತಾನು ಅಮ್ಮನ ಆಸೆ ಈಡೇರಿಸಲೆಂದೇ ಶಿಕ್ಷಣ ಕ್ಷೇತ್ರದತ್ತ ಛಲದಿಂದ ಗಮನ ಹರಿಸಿದೆ. ಇದೀಗ ಡಾಕ್ಟರೇಟ್ ದೊರಕಿರುವುದು ಅಮ್ಮನ ಆಸೆಯನ್ನು ಈಡೇರಿಸಿದ ನೆಮ್ಮದಿಗೆ ಕಾರಣವಾಗಿದೆ ಎಂದೂ ಪಲ್ಲವಿ ಭಾವುಕರಾಗಿ ನುಡಿದರು.

ಪಲ್ಲವಿಗೆ ಪ್ರಾರಂಭದಿAದಲೂ ತನ್ನ ಕುಟುಂಬ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿತ್ತು. ಇದೀಗ ಆಕೆ ಡಾಕ್ಟರೇಟ್ ಪಡೆದಿರುವುದು ನನ್ನ ಜೀವನದ ಬಹಳ ದೊಡ್ಡ ಸಂತೋಷಕ್ಕೆ ಕಾರಣವಾಗಿದೆ. ವಿಧಿ ಆಕೆಯನ್ನು ೧೮ ವರ್ಷಗಳ ಹಿಂದೆ ಪ್ರಾಣಸಹಿತ ಕಾಪಾಡಿತ್ತು. ಈಗ ವಿಧಿಯ ಲೀಲೆ ಎಂಬAತೆ ಈಕೆ ಡಾಕ್ಟರ್ ಎನಿಸಿಕೊಂಡ ಸಾಧನೆ ತೋರಿದ್ದಾಳೆ. ಛಲ ಮತ್ತು ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪಲ್ಲವಿ ಬಹಳ ದೊಡ್ಡ ಉದಾಹರಣೆಯಾಗಿದ್ದಾಳೆ ಎಂದು ಮಡಿಕೇರಿಯ ಸಮಾಜಸೇವಕರಾದ ಕೆ.ಟಿ. ಬೇಬಿ ಮ್ಯಾಥ್ಯು ಹೆಮ್ಮೆ ವ್ಯಕ್ತಪಡಿಸಿದರು.

ದುರಂತ ಘಟನೆಯಲ್ಲಿ ಬದುಕಿ ಬಂದ ಪಲ್ಲವಿಗೆ ೨೦೦೬ ರಲ್ಲಿ ಮಡಿಕೇರಿ ಮತ್ತು ಕೊಡಗಿನ ಜನತೆ ಸಾಕಷ್ಟು ನೆರವು ನೀಡಿ ಉಜ್ವಲ ಭವಿಷ್ಟಕ್ಕಾಗಿ ಪ್ರಾರ್ಥಿಸಿದ್ದರು. ಈ ರೀತಿ ಪ್ರಾರ್ಥಿಸಿದವರೆಲ್ಲರ ಪ್ರಾರ್ಥನೆ ಈಡೇರುವಂತೆ ಪಲ್ಲವಿ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ಕಾರಣರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮಡಿಕೇರಿ ಮಗಳ ಈ ಸಾಧನೆಯ ಯಶಸ್ಸು ಖಂಡಿತಾ ಎಲ್ಲರೂ ಸಂಭ್ರಮಿಸುವAಥದ್ದು.

ಕೊನೇ ಹನಿ

ಮಂಗಳಾದೇವಿ ನಗರದಲ್ಲಿ ಭೂಕುಸಿತದಿಂದಾಗಿ ೨೦೦೬ ರಲ್ಲಿ ಮನೆ, ಬದುಕು ಮಣ್ಣುಪಾಲಾಗಿರಬಹುದು, ಆದರೆ ಜೀವಂತ ಉಳಿದ ಪಲ್ಲವಿ ಪಾಲಿಗೆ ಜೀವನದ ಛಲ, ಸ್ಥೆರ್ಯ ಮಾತ್ರ ಕುಸಿಯಲಿಲ್ಲ. ಸಾಧಿಸಬೇಕೆಂಬ ಮಹದಾಸೆ ಮಣ್ಣು ಪಾಲಾಗಲಿಲ್ಲ. ಹೀಗಾಗಿಯೇ ಈಗ ಬೆಂಕಿಯಲ್ಲಿ ಅರಳಿದ ಹೂವಿನಂತೆ ಪಲ್ಲವಿ ಸಂಕಷ್ಟಗಳನ್ನು ಎದುರಿಸಿ ಸಮಸ್ಯೆಗಳ ನಡುವೇ ಜೀವನದಲ್ಲಿ ಅಂದುಕೊAಡದ್ದನ್ನು ಜಾರಿಗೊಳಿಸಿ ಮನಸ್ಸಿದ್ದಲ್ಲಿ ಎಂಥ ಸಾಧನೆಯೂ ಸಾಧ್ಯ ಎಂದು ನಿರೂಪಿಸಿದ್ದಾರೆ.