ವೀರಾಜಪೇಟೆ, ಜೂ. ೧೬: ಕ್ರೀಡೆ ಎಂದರೆ ಸೋಲು ಗೆಲುವುಗಳು ಇದ್ದೇ ಇರುತ್ತದೆ. ಅದರೇ ಸೋಲಿನ ಹತಾಶೆಯಿಂದ ವೈಷಮ್ಯ ಹುಟ್ಟಿ ಮಾರಾಮಾರಿಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣ ವರದಿಯಾಗಿದೆ. ನಗರದಲ್ಲಿ ಯುವಕರಿರ್ವರ ನಡುವೆ ಮಾರಾಮಾರಿಯಾಗಿ ಯುವಕನ ಮೇಲೆ ಹಲ್ಲೆ ಪ್ರಕರಣ ದಾಖಲಾದ ಘಟನೆ ವೀರಾಜಪೇಟೆ ಮಾಂಸ ಮಾರುಕಟ್ಟೆ ಜಂಕ್ಷನ್ನಲ್ಲಿ ನಡೆದಿದೆ. ವೀರಾಜಪೇಟೆ ವಿಜಯನಗರದ ನಿವಾಸಿ ಅಬ್ಬಾಸ್ (೩೨) ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಘಟನೆಯ ವಿವರ
ಸುಮಾರು ಎರಡು ತಿಂಗಳ ಹಿಂದೆ ಎನ್.ಪಿ.ಎಲ್ ಎಂಬ ಕ್ರಿಕೆಟ್ ಪಂದ್ಯಾಟ ವೀರಾಜಪೇಟೆ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಅಯೋಜನೆಗೊಂಡಿತ್ತು. ಪಂದ್ಯಾಟ ನಡೆಯುತ್ತಿದ್ದ ವೇಳೆ ಅಬ್ಬಾಸ್ ಮತ್ತು ಇತರ ಸ್ನೇಹಿತರು ಒಂದು ತಂಡವನ್ನು ಪ್ರತಿನಿಧಿಸಿದ್ದರು. ಅಬ್ಬಾಸ್ನ ಮೇಲೆ ಹಲ್ಲೆ ಮಾಡಿ ಇದೀಗ ಪ್ರಕರಣ ದಾಖಲಾದ ನೆಹರುನಗರದ ವ್ಯಕ್ತಿ ಶಂಷುದ್ದೀನ್ (೨೬) ಮತ್ತೊಂದು ತಂಡವನ್ನು ಪ್ರತಿನಿಧಿಸಿದ್ದ ಎನ್ನಲಾಗಿದೆ. ಪಂದ್ಯಾಟದ ವೇಳೆಯಲ್ಲಿ ಅಬ್ಬಾಸ್ ಮತ್ತು ಸ್ನೇಹಿತರಾದ ನವಾಫ್, ತಾಹಿರ್, ಮತ್ತು ಅಜೂಂ ಎಂಬುವವರು ಶಂಷುದ್ದೀನ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೆ ಒಳಗಾಗಿದ್ದ ಶಂಷುದ್ದೀನ್ ಅಬ್ಬಾಸ್ ಮತ್ತು ಸ್ನೇಹಿತರ ಮೇಲೆ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಆರೋಪದ ವೈಷಮ್ಯ ಮತ್ತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಮುಂದೆ ಮಾರಾಮಾರಿ ನಡೆಯಿತು. ನಗರದ ಮಾಂಸ ಮಾರುಕಟ್ಟೆಯ ಬಳಿ ಶಂಷುದ್ದೀನ್ ವಸ್ತು ಖರೀದಿಗೆಂದು ನಿಂತಿದ್ದ, ಮಾರುಕಟ್ಟೆ ಅಂಚಿನಲ್ಲಿ ಅಬ್ಬಾಸ್ ಕಾಣಿಸಿಕೊಂಡಿದ್ದಾನೆ. ಈರ್ವರು ಮುಖಾಮುಖಿಯಾಗಿ ವಾದಗಳು ನಡೆದಿದೆ. ಶಂಷುದ್ದೀನ್ ಅಬ್ಬಾಸ್ನ ಮುಖ ಭಾಗ, ಮೂಗಿನ ಮೇಲೆ ಭುಜದ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಅಬ್ಬಾಸ್ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಗಾಯಾಳು ಅಬ್ಬಾಸ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಠಾಣೆಯಲ್ಲಿ ಶಂಷುದ್ದೀನ್ ಮೇಲೆ ೩೦೭ ಐ.ಪಿ.ಸಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
-ಕಿಶೋರ್ ಕುಮಾರ್ ಶೆಟ್ಟಿ