ವೀರಾಜಪೇಟೆ, ಜೂ. ೧೬: ವೀರಾಜಪೇಟೆ ಕಾವೇರಿ ವಿದ್ಯಾ ಸಂಸ್ಥೆಯ ಗೇಣಿ ಮತ್ತು ಪಹಣಿ ಪತ್ರವನ್ನು ಶಾಸಕ ಎ.ಎಸ್ ಪೊನ್ನಣ್ಣ ಅವರು ಸಂಸ್ಥೆಯ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

೧೯೮೦ರಲ್ಲಿ ಆರಂಭವಾದ ಕಾವೇರಿ ಕಾಲೇಜು ವೀರಾಜಪೇಟೆ ಜಾಗದ ಮೂಲ ಗೇಣಿ ಹಾಗೂ ಪಹಣಿ ಪತ್ರ ಸ್ಥಳದ ಮೂಲ ಮಾಲೀಕ ಕೀತಿ ಯಂಡ ಅಪ್ಪಾಜಿ ಹೆಸರಿನಲ್ಲಿ ಇತ್ತು. ೪೦ ದಶಕಗಳಿಂದ ವಿದ್ಯಾಸಂಸ್ಥೆಯವರು ಎಷ್ಟೆ ಪ್ರಯತ್ನಪಟ್ಟರು ಸ್ಥಳದ ಮಾಲೀಕತ್ವವನ್ನು ವಿದ್ಯಾಸಂಸ್ಥೆಯ ಹೆಸರಿಗೆ ಬದಲಾಯಿಸಲು ಸಾಧ್ಯವಾ ಗಲಿಲ್ಲ. ಈ ವಿಚಾರದ ಬಗ್ಗೆ ತಿಳಿದು ವೀರಾಜಪೇಟೆ ಪುರಸಭೆ ಸದಸ್ಯೆ ದೇಚಮ್ಮ ಕಾಳಪ್ಪ ಈ ವಿಚಾರವನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು. ಶಾಸಕರು ಮುತುವರ್ಜಿ ವಹಿಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕೀತಿಯಂಡ ಅಪ್ಪಾಜಿ ಹೆಸರಿನಲ್ಲಿದ್ದ ಗೇಣಿ ಹಾಗೂ ಪಹಣಿ ಪತ್ರವನ್ನು ಕಾವೇರಿ ವಿದ್ಯಾಸಂಸ್ಥೆ ಹೆಸ ರಿಗೆ ಬದಲಾಯಿಸಿ ಮಂಗಳವಾರ ತಮ್ಮ ಕಚೇರಿಯಲ್ಲಿ ದಾಖಲೆಯನ್ನು ಕಾವೇರಿ ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು.

ಆಡಳಿತ ಮಂಡಳಿಯ ಪರವಾಗಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಾಲ್ಡಾನ ಹಾಗೂ ಉಪನ್ಯಾಸಕ ವರ್ಗದವರು ಪತ್ರವನ್ನು ಸ್ವೀಕರಿಸಿದರು. ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕರು ಕಾವೇರಿ ವಿದ್ಯಾಸಂಸ್ಥೆ ೪೦ ದಶಕಗಳಿಂದ ಉತ್ತಮ ಶೈಕ್ಷಣಿಕ ಸೇವೆ ನೀಡುತ್ತಿದ್ದು, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಹ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದೇ ರೀತಿ ಸಮಾಜಕ್ಕೆ ಅವರ ಸೇವೆ ಮುಂದುವರೆಯಲಿ ಎಂದರು.

ಈ ಸಂದರ್ಭದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಐ.ಕ್ಯೂ.ಎ.ಸಿ ಸಂಚಾಲಕಿ ಡಾ.ಕೆ.ಜಿ. ವೀಣಾ, ಅಧೀಕ್ಷಕ ಜಗದೀಶ್ ಬಿ.ಎಸ್, ಸೋಮನಾಥ್, ಉಪನ್ಯಾಸಕರ ರಾಘವೇಂದ್ರ ಎಲ್.ಆರ್, ಅಕ್ಷಿತಾ ನಾಯ್ಕ್ ಟಿ, ಸುನಿಲ್‌ಕುಮಾರ್ ಬಿ.ಬಿ. ಪುರಸಭೆ ಸದಸ್ಯರಾದ ದೇಚಮ್ಮ ಕಾಳಪ್ಪ, ಡಿ.ಪಿ.ರಾಜೇಶ್, ಎಸ್ ಹೆಚ್. ಮತೀನ್ ಹಾಜರಿದ್ದರು.