ಕುಶಾಲನಗರ, ಜೂ. ೧೬: ಕುಶಾಲನಗರ ಪಟ್ಟಣ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳನ್ನು ಪ್ರವಾಹ ಮುಕ್ತವನ್ನಾಗಿಸಲು ಕಾವೇರಿ ನದಿಗೆ ತಡೆಗೋಡೆ ನಿರ್ಮಾಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಡಾವಣೆಯ ನೀರು ಹರಿಯುವಂತಹ ಕಾಮಗಾರಿಗಳು ಭರದಿಂದ ಸಾಗುತ್ತಿವೆ.

ಪಟ್ಟಣದ ಕುವೆಂಪು ಬಡಾವಣೆ, ಸಾಯಿ ಬಡಾವಣೆ ವ್ಯಾಪ್ತಿಯಲ್ಲಿ ಸುಮಾರು ರೂ. ೪.೫ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ನದಿ ನೀರು ಬಡಾವಣೆಗಳಿಗೆ ನುಗ್ಗದಂತೆ ಕಾರ್ಯ ನಡೆಯುತ್ತಿದೆ.

ಕಳೆದ ೨೦೧೮ ರಿಂದ ನಿರಂತರವಾಗಿ ಪ್ರವಾಹ ಬರುವ ಮೂಲಕ ಪಟ್ಟಣದ ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡು ಬಡಾವಣೆ ನಿವಾಸಿಗಳಿಗೆ ಭಾರೀ ಪ್ರಮಾಣದ ಕಷ್ಟ-ನಷ್ಟ ಉಂಟಾಗಿತ್ತು. ಪ್ರತಿ ಮಳೆಗಾಲದಲ್ಲಿ ಬಡಾವಣೆಯ ನಿವಾಸಿಗಳು ಆತಂಕದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಈ ಸಂಬAಧ ಸರಕಾರದ ಮೂಲಕ ಹಿಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನದಿಯ ಹೂಳೆತ್ತುವುದು ಮತ್ತು ನಿರ್ವಹಣೆ ಕಾಮಗಾರಿ ನಡೆಸುವ ಮೂಲಕ ಬಹುತೇಕ ಪ್ರವಾಹ ಆತಂಕ ದೂರ ಆಗಿತ್ತು.

ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುವ ಸಂದರ್ಭ ಪ್ರವಾಹ ಉಂಟಾಗಿ ತಗ್ಗು ಪ್ರದೇಶದ ಬಡಾವಣೆಗಳು ಮುಳುಗುವ ಆತಂಕದಲ್ಲಿದ್ದು, ಈ ಹಿನ್ನೆಲೆ ಇದೀಗ ಸಾಯಿ ಬಡಾವಣೆ ಮತ್ತು ಕುವೆಂಪು ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಗಳು ನಡೆಯುತ್ತಿವೆ.

ಇತ್ತೀಚೆಗೆ ಬಡಾವಣೆಗಳಿಗೆ ಭೇಟಿ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಈ ಮಳೆಗಾಲದ ಅವಧಿಯ ಮುನ್ನ ಇದಕ್ಕೆ ಕೂಡಲೇ ಶಾಶ್ವತ ಪರಿಹಾರ ಕಂಡುಹಿಡಿಯುವAತೆ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಸಾಯಿ ಬಡಾವಣೆಯಲ್ಲಿ ರಾಜಕಾಲುವೆಯ ಮೂಲಕ ಹರಿಯುವ ಭಾರೀ ಪ್ರಮಾಣದ ನೀರು ನದಿಗೆ ಹರಿಯುವ ಸಂಬAಧ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನದಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದ್ದು, ಮಳೆಗಾಲದ ಅವಧಿಯಲ್ಲಿ ನದಿಯಿಂದ ಬಡಾವಣೆಗೆ ನೀರು ನುಗ್ಗದಂತೆ ವಿಶೇಷ ತಂತ್ರಜ್ಞಾನದೊAದಿಗೆ ಕಾಮಗಾರಿ ನಡೆದಿದೆ.

ಈ ಮಳೆಗಾಲಕ್ಕೆ ಮುನ್ನ ಕೆಲಸ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.

ಪಟ್ಟಣದ ಸಾಯಿ ಬಡಾವಣೆ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಕಿರಣ್ ಅವರ ನೇತೃತ್ವದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ರಾಜ ಕಾಲುವೆಯ ನೀರು ಸರಾಗವಾಗಿ ನದಿಗೆ ಹರಿಯುವಂತೆ ಮಾಡುವುದು, ಪ್ರವಾಹ ಸಂದರ್ಭ ಕಾವೇರಿ ನದಿಯ ನೀರು ಬಡಾವಣೆಗೆ ನುಗ್ಗದಂತೆ ವಿಶೇಷ ತಂತ್ರಜ್ಞಾನದ ಗೇಟ್ ಅಳವಡಿಸಲಾಗುವುದು ಎಂದು ಕಿರಣ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕುವೆಂಪು ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಬಡಾವಣೆಯ ಉದ್ದಕ್ಕೂ ನದಿ ಬದಿಯಲ್ಲಿ ಬೃಹತ್ ಪ್ರಮಾಣದ ತಡೆಗೋಡೆ ನಿರ್ಮಾಣವಾಗುತ್ತಿದ್ದು ನದಿಯಿಂದ ಬಡಾವಣೆಗೆ ನೀರು ನುಗ್ಗದಂತೆ ಯೋಜನೆ ರೂಪಿಸಲಾಗಿದೆ. ನಿಗಮದ ಸಹಾಯಕ ಅಭಿಯಂತರ ಸಿದ್ಧರಾಜು ಅವರ ನೇತೃತ್ವದಲ್ಲಿ ಈ ಕಾಮಗಾರಿ ನಡೆದಿದೆ.

ಬಡಾವಣೆಗಳ ಮೇಲ್ಭಾಗದಿಂದ ರಾಜ ಕಾಲುವೆಯ ಮೂಲಕ ಹೆಚ್ಚು ಪ್ರಮಾಣದ ನೀರು ಹರಿಯುತ್ತಿದ್ದು ಇದನ್ನು ನಿಯಂತ್ರಿಸಲು ವೈಜ್ಞಾನಿಕವಾಗಿ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಕ್ಷೇತ್ರದ ಶಾಸಕ ಮಂತರ್ ಗೌಡ ತಿಳಿಸಿದ್ದು, ಯಾವುದೇ ಸಂದರ್ಭ ಬಡಾವಣೆಗಳಿಗೆ ನೀರು ನುಗ್ಗಿ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಮಳೆಗಾಲ ಅವಧಿಯಲ್ಲಿ ರಸ್ತೆ ಮೇಲೆ ಅಥವಾ ಮನೆಗಳಿಗೆ ನೀರು ಹರಿಯದಂತೆ ಎಲ್ಲೆಡೆ ಚರಂಡಿಗಳನ್ನು ನಿರ್ವಹಣೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದು, ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ ಮುನ್ನೆಚ್ಚರಿಕೆ ವಹಿಸ ಲಾಗುತ್ತಿದೆ ಎಂದು ತಿಳಿಸಿದ್ದಾರೆ.

- ಚಂದ್ರಮೋಹನ್, ಕುಶಾಲನಗರ